ಆ್ಯಂಕರ್ ಅನುಶ್ರೀ ವಿವಾಹ ವಿಚಾರ ಸದ್ಯ ಸುದ್ದಿ ಆಗುತ್ತಿದೆ. ಆಗಸ್ಟ್ 28ರಂದು ಇವರ ಮದಿವೆ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗಲೇ ಅನುಶ್ರೀ ಅವರಿಗೂ ರೋಷನ್ಗೂ ಪರಿಚಯ ಬೆಳೆದಿದ್ದು ಹೇಗೆ ಎನ್ನುವ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕೊರೆಯುತ್ತಿತ್ತು. ಇದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಆರಂಭದಲ್ಲಿ ಇವರದ್ದು ಅರೇಂಜ್ ಮ್ಯಾರೇಜ್ ಎನ್ನಲಾಗುತ್ತಿತ್ತು. ಆದರೆ, ಇದು ಸಂಪೂರ್ಣ ಅರೇಂಜ್ ಮ್ಯಾರೇಜ್ ಅಲ್ಲ ಎಂದು ತಿಳಿದು ಬಂದಿದೆ. ಇವರ ಭೇಟಿಗೆ ಕಾರಣ ಆಗಿದ್ದು ಅಪ್ಪು ಅನ್ನೋದು ಮತ್ತೊಂದು ವಿಶೇಷ.

ಅನುಶ್ರೀ ಅವರು ಅಪ್ಪು ಅವರ ದೊಡ್ಡ ಅಭಿಮಾನಿ. ಪುನೀತ್ ಅವರು ಬದುಕಿದ್ದಾಗ ಸಾಕಷ್ಟು ಬಾರಿ ಅವರ ಸಂದರ್ಶನ ಮಾಡಿದ್ದರು. ಪುನೀತ್ ನಿಧನ ಹೊಂದಿದ ಬಳಿಕವೂ ಅಪ್ಪುಗಾಗಿ ಅವರ ಹೃದಯ ಮಿಡಿಯಿತು. ಯೂಟ್ಯೂಬ್ ಚಾನೆಲ್ಗೆ ಅಪ್ಪು ಫೋಟೋ ಇರೋ ಲೋಗವನ್ನು ಅನುಶ್ರೀ ಮಾಡಿಸಿದ್ದಾರೆ ಅನ್ನೋದು ವಿಶೇಷ. ಇದು ಪುನೀತ್ ಮೇಲೆ ಅವರಿಗೆ ಎಷ್ಟು ಪ್ರೀತಿ ಇದೆ ಎಂಬುದನ್ನು ತೋರಿಸುತ್ತದೆ. ಈಗ ಅವರು ಅಪ್ಪು ಅಭಿಮಾನಿಯನ್ನೇ ವಿವಾಹ ಆಗುತ್ತಿದ್ದಾರೆ. ರೋಷನ್ ಕೂಡ ಪುನೀತ್ ಅವರ ದೊಡ್ಡ ಫ್ಯಾನ್ ಎಂದು ತಿಳಿದು ಬಂದಿದೆ.