ರಾಜಮೌಳಿ ನಿರ್ದೇಶಿಸುತ್ತಿರುವ ಹೊಸ ಸಿನಿಮಾಕ್ಕೆ ತಾತ್ಕಾಲಿಕವಾಗಿ ‘ಗ್ಲೋಬ್ ಟ್ರೋಟೆರ್’ ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಹೆಸರು ಇಂದು ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಬಹಿರಂಗಗೊಳ್ಳಲಿದೆ. ಮಾತ್ರವಲ್ಲದೆ, ಸಿನಿಮಾದ ಮೊದಲ ಟೀಸರ್ ಸಹ ಇಂದೇ ಬಿಡುಗಡೆ ಆಗಲಿದೆ. ಇವುಗಳ ಜೊತೆಗೆ ಸಿನಿಮಾ ಬಿಡುಗಡೆ ದಿನಾಂಕವನ್ನೂ ಸಹ ರಾಜಮೌಳಿ ಘೋಷಣೆ ಮಾಡಲಿದ್ದಾರೆ. ಆದರೆ ಅವರು ಘೋಷಣೆ ಮಾಡುವ ಮುನ್ನವೇ ಕೆಲ ಮೂಲಗಳಿಂದ ಸಿನಿಮಾದ ಬಿಡುಗಡೆ ದಿನಾಂಕ ಲೀಕ್ ಆಗಿದೆ.
ಸಿನಿಮಾ ಪ್ರೇಮಿಗಳಿಗೆ ತಿಳಿದಿರುವಂತೆ ರಾಜಮೌಳಿ ಸಿನಿಮಾ ನಿರ್ಮಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಬಿಡುಗಡೆಗೂ ಸಹ. ‘ಆರ್ಆರ್ಆರ್’ ಸಿನಿಮಾವನ್ನು 2017 ರಲ್ಲಿ ಘೋಷಣೆ ಮಾಡಿದರು. ಆದರೆ ಆ ಸಿನಿಮಾ ಬಿಡುಗಡೆ ಆಗಿದ್ದು 2022 ರಲ್ಲಿ. ‘ಬಾಹುಬಲಿ’ ಸಿನಿಮಾಗಳಿಗೂ ಸಹ ಪ್ರತಿ ಸಿನಿಮಾಕ್ಕೂ ಎರಡು ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಂಡರು. ಈಗ ‘ಗ್ಲೋಬ್ ಟ್ರೋಟೆರ್’ ಸಿನಿಮಾವನ್ನು ತಮ್ಮ ಈ ಹಿಂದಿನ ಸಿನಿಮಾಗಳಿಂತಲೂ ಹೆಚ್ಚು ಅದ್ಧೂರಿಯಾಗಿಯೂ, ಹೆಚ್ಚು ಜತನದಿಂದಲೂ ಕಟ್ಟುತ್ತಿದ್ದಾರೆ. ಹಾಗಾಗಿ ತಮ್ಮ ಈ ಹಿಂದಿನ ಸಿನಿಮಾಗಳಿಗಿಂತಲೂ ಹೆಚ್ಚಿನ ಸಮಯವನ್ನು ಈ ಸಿನಿಮಾ ತೆಗೆದುಕೊಳ್ಳಲಿದೆ.
‘ಗ್ಲೋಬ್ ಟ್ರೋಟೆರ್’ ಸಿನಿಮಾದ ಶೂಟಿಂಗ್ ಪ್ರಾರಂಭವಾಗಿ ಈಗಾಗಲೇ ಒಂದು ವರ್ಷ ಆಗುತ್ತಾ ಬಂದಿದೆ. ಇದೇ ವರ್ಷದ ಜನವರಿ ತಿಂಗಳಲ್ಲಿ ಸಿನಿಮಾದ ಮುಹೂರ್ತ ನಡೆದಿತ್ತು. ಮುಹೂರ್ತಕ್ಕೆ ಮುಂಚೆಯೇ ಹಲವಾರು ತಿಂಗಳುಗಳ ಕಾಲ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆದಿತ್ತು. ಇಂದು ಸಿನಿಮಾದ ಮೊದಲ ಟೀಸರ್ ಬಿಡುಗಡೆ ಆಗಲಿದೆ. ಅಂದಹಾಗೆ ಈ ಸಿನಿಮಾ ಬಿಡುಗಡೆ ಆಗಲು ಇನ್ನೂ ಒಂದು ವರ್ಷಕ್ಕೂ ಹೆಚ್ಚು ಸಮಯ ಹಿಡಿಯಲಿದೆ. 2027ರ ಮಾರ್ಚ್ 25ರಂದು ‘ಗ್ಲೋಬ್ ಟ್ರೋಟೆರ್’ ಸಿನಿಮಾ ತೆರೆಗೆ ಬರಲಿದೆ.
For More Updates Join our WhatsApp Group :
