ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾ ಆಗಸ್ಟ್ 14 ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಹಲವು ಸ್ಟಾರ್ ನಟರು ನಟಿಸಿದ್ದಾರೆ. ರಜನೀಕಾಂತ್ ಸಿನಿಮಾದ ನಾಯಕ. ಆದರೆ ರಜನೀಕಾಂತ್ಗೆ ನಾಯಕ ಪಾತ್ರಕ್ಕಿಂತಲೂ ಬೇರೊಂದು ಪಾತ್ರದಲ್ಲಿ ನಟಿಸುವ ಆಸೆ ಇತ್ತಂತೆ. ಆದರೆ ಆ ಪಾತ್ರದಲ್ಲಿ ನಟಿಸಿರುವುದು ಯಾರು?
ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಬಲು ಜೋರಾಗಿ ನಡೆಯುತ್ತಿದೆ. ಇತ್ತೀಚೆಗೆ ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆದಿದೆ. ನಟ ರಜನೀಕಾಂತ್ ‘ಕೂಲಿ’ ಸಿನಿಮಾನಲ್ಲಿ ದೇವ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ರಜನೀಕಾಂತ್ಗೆ ದೇವ ಪಾತ್ರಕ್ಕಿಂತಲೂ ಸಿನಿಮಾದ ಮತ್ತೊಂದು ಪಾತ್ರದಲ್ಲಿ ನಟಿಸುವ ಆಸೆಯಿತ್ತಂತೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.
‘ಕೂಲಿ’ ಸಿನಿಮಾನಲ್ಲಿ ರಜನೀಕಾಂತ್ ಸೇರಿದಂತೆ ಹಲವು ಸ್ಟಾರ್ ನಟ-ನಟಿಯರು ನಟಿಸಿದ್ದಾರೆ. ಸಿನಿಮಾದಲ್ಲಿ ಅಕ್ಕಿನೇನಿ ನಾಗಾರ್ಜುನ ಸಹ ನಟಿಸಿದ್ದು, ಅವರು ನಟಿಸಿರುವ ಪಾತ್ರವಾದ ಸೈಮನ್ ಪಾತ್ರದಲ್ಲಿ ನಟಿಸುವ ಆಸೆ ರಜನೀಕಾಂತ್ಗೆ ಇತ್ತಂತೆ. ಆ ಬಗ್ಗೆ ನಿರ್ದೇಶಕ ಲೋಕೇಶ್ ಕನಗರಾಜ್ ಬಳಿ ಕೇಳಿಯೂ ಇದ್ದರಂತೆ ಆದರೆ ಕನಗರಾಜ್ ಒಪ್ಪಲಿಲ್ಲವಂತೆ.
ತೆಲುಗು ಪ್ರೇಕ್ಷಕರಿಗಾಗಿ ಬಿಡುಗಡೆ ಮಾಡಿರುವ ವಿಡಿಯೋನಲ್ಲಿ ಮಾತನಾಡಿರುವ ನಟ ರಜನೀಕಾಂತ್, ‘ಕಿಂಗ್ ಅಕ್ಕಿನೇನಿ ನಾಗಾರ್ಜುನ ‘ಸೈಮನ್’ ಹೆಸರಿನ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಅಸಲಿಗೆ ಆ ಪಾತ್ರದಲ್ಲಿ ನಾನು ನಟಿಸಬೇಕು ಎಂದುಕೊಂಡಿದ್ದೆ. ಏಕೆಂದರೆ ಆ ಪಾತ್ರ ಅಷ್ಟು ಅದ್ಭುತವಾಗಿದೆ. ಬಹಳ ಸ್ಟೈಲಿಷ್ ಆಗಿದೆ. ನಾನು ಸಹ ವಿಲನ್ ಆಗಿದ್ದವನೇ ಅಲ್ಲವೆ, ಹಾಗಾಗಿ ಆ ಪಾತ್ರದಲ್ಲಿ ನಟಿಸಬೇಕು ಎಂಬುದು ನನ್ನ ಆಸೆಯಾಗಿತ್ತು’ ಎಂದಿದ್ದಾರೆ ರಜನೀಕಾಂತ್.
‘ವಿಲನ್ ಪಾತ್ರದಲ್ಲಿ ನಾಗಾರ್ಜುನ ನಟಿಸುತ್ತಿದ್ದಾರೆ ಎಂದು ಕೇಳಿದಾಗ ನನಗೆ ಆಶ್ಚರ್ಯವಾಯ್ತು. ಅವರಿಗೆ ಹಣಕ್ಕೆ ಕೊರತೆ ಇಲ್ಲ, ಸಂಭಾವನೆಯ ಆಸೆ ತೋರಿಸಿ ಅವರನ್ನು ಪಾತ್ರದಲ್ಲಿ ನಟಿಸುವಂತೆ ಮಾಡಲು ಸಾಧ್ಯವಿಲ್ಲ, ಪಾತ್ರ ಇಷ್ಟವಾದರೆ ಮಾತ್ರವೇ ಅವರು ನಟಿಸುತ್ತಾರೆ. ಅವರಿಗೆ ಸೈಮನ್ ಪಾತ್ರ ಬಹಳ ಇಷ್ಟವಾದ ಕಾರಣದಿಂದಾಗಿ ಅವರು ನಟಿಸಿದರು. ಬಹಳ ಸ್ಟೈಲಿಷ್ ಆಗಿ, ಅದ್ಭುತವಾಗಿ ಅವರು ಆ ಪಾತ್ರ ನಿರ್ವಹಿಸಿದ್ದಾರೆ. ಸ್ವತಃ ವಿಲನ್ ಆಗಿದ್ದ ನನಗೆ ನಾನು ಹೀಗೆ ನಟಿಸಬಲ್ಲೆನಾ ಎಂದೆನಿಸುವಂತೆ ಅವರು ನಟಿಸಿದ್ದಾರೆ’ ಎಂದಿದ್ದಾರೆ ರಜನೀಕಾಂತ್.
‘ನಾನು ಸುಮಾರು 30 ವರ್ಷಗಳ ಮುಂಚೆ ನಾಗಾರ್ಜುನ ಜೊತೆ ನಟಿಸಿದ್ದೆ. ಆಗ ಹೇಗಿದ್ದರೊ ಈಗಲೂ ಹಾಗೆಯೇ ಇದ್ದಾರೆ. ಅದೇ ಚಾರ್ಮ್, ಅದೇ ಫಿಸಿಕ್. ನಮಗೆ ನೋಡಿ ಕೂದಲು ಉದುರಿ ವಯಸ್ಸಾಗಿ ಹೋಗಿದೆ. ನಾಗಾರ್ಜುನ ಒಬ್ಬ ಅದ್ಭುತವಾದ ವ್ಯಕ್ತಿ, ಮಲೇಷ್ಯಾನಲ್ಲಿ ಸತತ 18 ದಿನ ಅವರೊಟ್ಟಿಗೆ ಕೆಲಸ ಮಾಡಿದೆ. ಅದನ್ನು ನಾನು ಮರೆಯುವಂತೆ ಇಲ್ಲ. ಅವರೊಬ್ಬ ಜಂಟಲ್ಮ್ಯಾನ್, ಅವರ ಬಳಿ ಇರುವ ಜ್ಞಾನ ಅಗಾಧವಾದುದು. ‘ಕೂಲಿ’ ಸಿನಿಮಾನಲ್ಲಿ ನಾಗಾರ್ಜುನ ಪಾತ್ರವೇ ಹೈಲೆಟ್’ ಎಂದಿದ್ದಾರೆ ರಜನೀಕಾಂತ್. ‘ಕೂಲಿ’ ಸಿನಿಮಾ ಆಗಸ್ಟ್ 14 ರಂದು ಬಿಡುಗಡೆ ಆಗಲಿದೆ.