ರಾಮನಗರ: 4 ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ ಕೊಲೆ

ಒಡಿಶಾ || ಬೀಚ್ಗೆ ಔಟಿಂಗ್ ಹೋಗಿದ್ದ ಯುವತಿ ಮೇಲೆ ಸಾಮೂಹಿಕ ಅ*ಚಾರ

ಮಾಗಡಿ: 4 ವರ್ಷದ ಹೆಣ್ಣು ಮಗುವನ್ನು ಸಂಬಂಧಿಯೇ ಅಪಹರಿಸಿ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಘಟನೆ ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಗುವಿನ ಶವವು ತಿಪ್ಪಗೊಂಡನಹಳ್ಳಿ ಬಳಿ ಸೋಮವಾರ ರಾತ್ರಿ ಪತ್ತೆಯಾಗಿದೆ.

ಘಟನೆಗೆ ಸಂಬಂಧಿಸಿದಂತೆ, ಆರೋಪಿ ಬೆಂಗಳೂರಿನ ಗೌರಿಪಾಳ್ಯದ ಇಮ್ರಾನ್ ಖಾನ್‌ ವಿರುದ್ಧ ಮಾಗಡಿ ಠಾಣೆ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಸಂತ್ರಸ್ತ ಮಗುವಿನ ಕುಟುಂಬದ ಸಂಬಂಧಿಯಾದ ಆರೋಪಿ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಅದೇ ರೀತಿ ಜುಲೈ 20ಕ್ಕೆ ಬಂದಿದ್ದ ಆತ, ಕೊಲೆಯಾಗಿರುವ ಹೆಣ್ಣು ಮಗುವಿನ ಜೊತೆಗೆ ಮತ್ತೊಂದು ಮಗುವನ್ನು ಸಂಜೆ ಅಂಗಡಿಗೆ ಕರೆದೊಯ್ದು ಐಸ್‌ಕ್ರೀಂ ಕೊಡಿಸಿಕೊಂಡು ಬಂದಿದ್ದ. ನಂತರ, ಮತ್ತೆ ಹೆಣ್ಣು ಮಗುವನ್ನು ತನ್ನೊಂದಿಗೆ ಕರೆದೊಯ್ದಿದ್ದ ಎಂದು ಪೊಲೀಸರು ತಿಳಿಸಿದರು.

ಸಂಜೆ 7 ಗಂಟೆಯಾದರೂ ಮಗು ಮನೆಗೆ ಬಾರದಿದ್ದರಿಂದ ಗಾಬರಿಗೊಂಡ, ತಾಯಿ ಅಕ್ಕಪಕ್ಕ ಹುಡುಕಾಡಿದರು. ಕಡೆಗೆ, ಅಂಗಡಿಗೆ ಮಗು ಕರೆದೊಯ್ದಿದ್ದ ಆರೋಪಿಗೆ ಕರೆ ಮಾಡಿದಾಗ ಆತ, ‘ನನಗೇನೂ ಗೊತ್ತಿಲ್ಲ’ ಎಂದು ಕರೆ ಸ್ಥಗಿತಗೊಳಿಸಿ, ಮೊಬೈಲ್ ಫೋನ್ ಸ್ವಿಚ್‌ ಆಫ್ ಮಾಡಿಕೊಂಡಿದ್ದ. ಅನುಮಾನಗೊಂಡ ತಾಯಿ ಠಾಣೆಗೆ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡು ಮಗು ಹಾಗೂ ಆರೋಪಿಗಾಗಿ ಹುಡುಕಾಟ ನಡೆಸಿದ್ದೆವು ಎಂದು ಹೇಳಿದರು.

ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಸೇರಿದಂತೆ, ವಿವಿಧ ಮೂಲಗಳನ್ನು ಆಧರಿಸಿ ಶೋಧ ಕಾರ್ಯ ನಡೆಸಿದಾಗ, ಆರೋಪಿ ತಿಪ್ಪಗೊಂಡನಹಳ್ಳಿ ಬಳಿಯ ರಸ್ತೆಯಲ್ಲಿ ಓಡಾಡಿರುವುದು ಗೊತ್ತಾಯಿತು. ಸುತ್ತಮುತ್ತ ಹುಡುಕಾಡಿದಾಗ ರಸ್ತೆ ಬದಿಯ ಬಂಡೆಯ ಬಳಿ ಬೆತ್ತಲೆ ಸ್ಥಿತಿಯಲ್ಲಿ ಮಗುವಿನ ಶವ ಪತ್ತೆಯಾಯಿತು. ನಂತರ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಸಹ ಬಂಧಿಸಲಾಯಿತು. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದವರಿಗೆ ಶವ ಹಸ್ತಾಂತರಿಸಲಾಯಿತು ಎಂದು ತಿಳಿಸಿದರು.

Leave a Reply

Your email address will not be published. Required fields are marked *