ನಂದಿ ಬೆಟ್ಟದ ಮೇಲೆ ಡಾಪ್ಲರ್ ವೆದರ್ ರಾಡಾರ್ ಸ್ಥಾಪನೆ

ಬೆಂಗಳೂರು: ಕರ್ನಾಟಕ ಕೊನೆಗೂ ಇದೇ ವರ್ಷ ತನ್ನದೇ ಆದ ಡಾಪ್ಲರ್ ವೆದರ್ ರಾಡಾರ್ ಹೊಂದಲಿದೆ. ಇದನ್ನು ಬೆಂಗಳೂರಿನಿಂದ 62 ಕಿಮೀ ದೂರದಲ್ಲಿರುವ ನಂದಿ ಬೆಟ್ಟದ ಮೇಲೆ ಸ್ಥಾಪಿಸಲಾಗುತ್ತಿದೆ. “ಎಲ್ಲವೂ ಅಂದುಕೊಂಡಂತೆ ನಡೆದರೆ (ಬಾಕಿ ಉಳಿದಿರುವ ಮಣ್ಣು ಪರೀಕ್ಷೆಯ ಫಲಿತಾಂಶಗಳು) DWR ಸ್ಥಾಪಿಸುವ ಕೆಲಸ ಎರಡು ತಿಂಗಳಲ್ಲಿ ಪ್ರಾರಂಭವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ನಿರ್ದೇಶಕ ಎನ್ ಪುವಿಯರಸನ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

IMD ಅಧಿಕಾರಿಗಳ ತಂಡ ತೋಟಗಾರಿಕೆ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳ ಜೊತೆಗೆ 10 ದಿನಗಳ ಹಿಂದೆ ನಂದಿ ಬೆಟ್ಟಕ್ಕೆ ಭೇಟಿ ನೀಡಿದ್ದು, ನಾಲ್ಕು ಸೈಟ್‌ಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಮಣ್ಣು ಪರೀಕ್ಷೆಗೆ ಮಾದರಿಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಒಂದೂವರೆ ತಿಂಗಳ ನಂತರ ಫಲಿತಾಂಶ ತಿಳಿಯಲಿದೆ.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಡಾ ಜಿತೇಂದ್ರ ಸಿಂಗ್ ಅವರು ಇತ್ತೀಚೆಗೆ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಪತ್ರ ಬರೆದು ಬೆಂಗಳೂರಿನಲ್ಲಿ ಇದೇ ವರ್ಷ ಸಿ- ಬ್ಯಾಂಡ್ ಡಾಪ್ಲರ್ ವೆದರ್ ರಾಡರ್ ನ್ನು ಸ್ಥಾಪಿಸಲಾಗುತ್ತಿದೆ. ಹಲವಾರು ಮಧ್ಯಸ್ಥಗಾರರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮುಂಚಿನ ಎಚ್ಚರಿಕೆ ವ್ಯವಸ್ಥೆಯನ್ನು ಬಲಪಡಿಸಲು ಈ ವ್ಯವಸ್ಥೆ ಮಾಡಲಾಗುತ್ತಿದೆ. ರಾಡಾರ್‌ಗಾಗಿ ಸ್ಥಳವನ್ನು ಗುರುತಿಸಲಾಗಿದೆ ಮತ್ತು ಅದನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.

ಬೆಂಗಳೂರಿನ ಯಲಹಂಕದ ವಾಯುಪಡೆಯಲ್ಲಿಯೂ IMD ಭೂಮಿಯನ್ನು ಆಯ್ಕೆ ಮಾಡಿದೆ. ಇದಕ್ಕೆ ಐಎಎಫ್ ಸಕಾರಾತ್ಮಕವಾಗಿ ಸ್ಪಂದಿಸಿದೆ. ನಂದಿ ಬೆಟ್ಟದ ಮಣ್ಣು DWR ಅಳವಡಿಸಲು ಅನುಕೂಲಕರವಾಗಿಲ್ಲದಿದ್ದರೆ, ಅದನ್ನು ಯಲಹಂಕದ ವಾಯುಪಡೆಯಲ್ಲಿ ಅಳವಡಿಸಲಾಗುವುದು. ಈಶಾನ್ಯ ರಾಜ್ಯಗಳಲ್ಲಿ ಬೆಟ್ಟಗಳ ಮೇಲೆ DWR ಸ್ಥಾಪಿಸಲಾಗಿದೆ. ನಂದಿ ಬೆಟ್ಟದಲ್ಲಿ ಯಾವುದೇ ನಿರ್ಮಾಣ ಕಾರ್ಯ ನಡೆಯದ ಕಾರಣ ಅಲ್ಲಿ ರಾಡಾರ್ ಅಳವಡಿಸುವುದು ಸೂಕ್ತ. ಇದನ್ನು ಸ್ಥಾಪಿಸುವಲ್ಲಿ ಪ್ರಮುಖ ಸವಾಲು ಎಂದರೆ ಅದರ 40 ಕಿಮೀ ವ್ಯಾಪ್ತಿಯೊಳಗೆ ಯಾವುದೇ ಎತ್ತರದ ರಚನೆ ಇರಬಾರದು ಎಂದು ಪುವಿಯರಸನ್ ಹೇಳಿದರು.

Leave a Reply

Your email address will not be published. Required fields are marked *