ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ‘ರಾಮಾಯಣ’ ಮತ್ತು ‘ಟಾಕ್ಸಿಕ್’ ಸಿನಿಮಾ ಮೂಲಕ ಪ್ಯಾನ್ ವರ್ಲ್ಡ್ ಸ್ಟಾರ್ ಆಗುವ ಯತ್ನದಲ್ಲಿದ್ದಾರೆ. ನಿನ್ನೆ ಯಶ್ ನಟನೆಯ ‘ರಾಮಾಯಣ’ ಸಿನಿಮಾದ ಗ್ಲಿಂಪ್ಸ್ ಬಿಡುಗಡೆ ಆಗಿದ್ದು, ಮೂರು ನಿಮಿಷದ ಗ್ಲಿಂಪ್ಸ್ ನೋಡಿದವರು, ಇದು ಪಕ್ಕಾ ಪ್ಯಾನ್ ವರ್ಲ್ಡ್ ಸಿನಿಮಾ ಆಗಲಿದೆ ಎಂದು ಕೊಂಡಾಡಿದ್ದಾರೆ. ‘ಟಾಕ್ಸಿಕ್’ ಸಿನಿಮಾವನ್ನು ಸಹ ವಿಶ್ವದರ್ಜೆಯಲ್ಲಿಯೇ ನಿರ್ಮಿಸಿದ್ದಾರೆ ನಟ ಯಶ್. ಯಶ್ ಈ ಎರಡು ಸಿನಿಮಾಗಳ ಮೂಲಕ ವಿಶ್ವ ಸಿನಿಮಾ ರಂಗಕ್ಕೆ ತೆರೆದುಕೊಳ್ಳಲಿದ್ದಾರೆ. ಆದರೆ ಅವರು ತಾವೊಬ್ಬ ಕನ್ನಡಿಗ ಎಂಬ ಅಸ್ಮಿತೆಯನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.

ನಿನ್ನೆ ‘ರಾಮಾಯಣ’ ಗ್ಲಿಂಪ್ಸ್ ಬಿಡುಗಡೆ ಆಗಿದ್ದು ರಾಷ್ಟ್ರದಾದ್ಯಂತ ಹಲವು ನಗರಗಳಲ್ಲಿ ಐಮ್ಯಾಕ್ಸ್ ಸ್ಕ್ರೀನ್ನಲ್ಲಿ ‘ರಾಮಾಯಣ’ ಗ್ಲಿಂಪ್ಸ್ ನೋಡಿ ಪ್ರೇಕ್ಷಕರು ಸಂಭ್ರಮಿಸಿದ್ದಾರೆ. ಯೂಟ್ಯೂಬ್ನಲ್ಲಿ ಕೋಟ್ಯಂತರ ಮಂದಿ ವೀಕ್ಷಣೆ ಮಾಡಿದ್ದಾರೆ. ‘ರಾಮಾಯಣ’ ಗ್ಲಿಂಪ್ಸ್ ಅನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ರಾಮಾಯಣ ಗ್ಲಿಂಪ್ಸ್ನ ಪೋಸ್ಟರ್ಗಳಲ್ಲಿ, ಸಿನಿಮಾನಲ್ಲಿ ನಟಿಸಿರುವ ಪ್ರಮುಖ ನಟ-ನಟಿಯರು ತಮ್ಮ ಸಹಿಗಳನ್ನು ಹಾಕಿದ್ದಾರೆ. ಅದರಂತೆ ನಟ ಯಶ್ ಸಹ ತಮ್ಮ ಸಹಿ ಹಾಕಿದ್ದಾರೆ. ಯಶ್ ಅವರ ಸಹಿ ಕನ್ನಡಿಗರು ಮೆಚ್ಚುವಂತಿದೆ.
ರಣ್ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರವಿ ದುಬೆ, ನಿರ್ದೇಶಕ ನಿತೀಶ್ ತಿವಾರಿ ಅವರುಗಳು ತಮ್ಮ ಸಹಿಯನ್ನು ಮಾಡಿದ್ದಾರೆ. ಯಶ್ ಹೊರತುಪಡಿಸಿ ಇನ್ನೆಲ್ಲರ ಸಹಿಯೂ ಇಂಗ್ಲೀಷ್ ಭಾಷೆಯಲ್ಲಿದೆ. ಆದರೆ ನಟ ಯಶ್ ಮಾತ್ರ ಕನ್ನಡದಲ್ಲೇ ಸಹಿ ಮಾಡಿದ್ದಾರೆ. ಯಶ್ ಅವರು ಕನ್ನಡದಲ್ಲಿ ಸಹಿ ಮಾಡಿರುವ ಚಿತ್ರಗಳನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ನಟನ ಕನ್ನಡ ಪ್ರೇಮವನ್ನು ಕೊಂಡಾಡುತ್ತಿದ್ದಾರೆ.
‘ರಾಮಾಯಣ’ ಸಿನಿಮಾನಲ್ಲಿ ಯಶ್, ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಸಿನಿಮಾಕ್ಕೆ ಬಂಡವಾಳವನ್ನೂ ಸಹ ಹೂಡಿದ್ದಾರೆ. ಇದರ ಜೊತೆಗೆ ‘ಟಾಕ್ಸಿಕ್’ ಸಿನಿಮಾಕ್ಕೂ ಸಹ ಯಶ್ ಬಂಡವಾಳ ಹೂಡಿದ್ದು, ಕವಿಎನ್ ಪ್ರೊಡಕ್ಷನ್ ಜೊತೆಗೆ ಸಹ ನಿರ್ಮಾಣ ಮಾಡಿದ್ದಾರೆ. ಆ ಸಿನಿಮಾದಲ್ಲಿಯೂ ಸಹ ಯಶ್ ತಮ್ಮ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ ಎನ್ನಲಾಗುತ್ತಿದೆ.