ಚಾಮರಾಜನಗರ: ಗುಂಡ್ಲುಪೇಟೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಭಿನ್ನ ರೀತಿಯ ಕಣ್ಣುಗಳುಳ್ಳ ವಿಶೇಷ ಚಿರತೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವನ್ಯಜೀವಿ ಛಾಯಾಗ್ರಾಹಕ ಧ್ರುವ್ ಪಾಟೀಲ್ ಈ ಚಿತ್ರವನ್ನು ಸೆರೆ ಹಿಡಿದು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ರೀತಿಯ ಚಿರತೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಎಡಗಣ್ಣು ಕಂದು, ಬಲಗಣ್ಣು ನೀಲಿ ಹಸಿರು!: ಹೆಣ್ಣು ಚಿರತೆಯೊಂದು ಮರದ ಮೇಲೆ ವಿರಮಿಸುತ್ತಿದ್ದು, ಅದರ ಎರಡೂ ಕಣ್ಣುಗಳೂ ಬೇರೆ ಬಣ್ಣ ಹೊಂದಿರುವುದನ್ನು ನೋಡಬಹುದು. ಎಡಗಣ್ಣು ನೀಲಿ ಹಸಿರಿನಲ್ಲಿದ್ದರೆ, ಬಲಗಣ್ಣು ಕಂದು ಬಣ್ಣದಲ್ಲಿದೆ. ಇದಕ್ಕೆ ‘ಹೆಟ್ರೋಕ್ರೊಮಿಯಾ’ ಎಂಬ ಅಂಶ ಕಾರಣವಾಗಿದ್ದು ಭಾರತದಲ್ಲಿ ಈ ರೀತಿಯ ವಿಭಿನ್ನ ಕಣ್ಣುಗಳನ್ನು ಹೊಂದಿರುವ ಚಿರತೆ ಈವರೆಗೆ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.