ಹಾಸನ : ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಡಾಬರ್ಮನ್ ತಳಿಯ ನಾಯಿ ರಕ್ಷಾ ವಯೋಸಹಜ ಅನಾರೋಗ್ಯದಿಂದ ನಿಧನವಾಗಿದೆ. 200ಕ್ಕೂ ಹೆಚ್ಚು ಪ್ರಕರಣಗಳ ಪತ್ತೆಗೆ ನೆರವಾಗಿದ್ದ ರಕ್ಷಾ, 47 ಪ್ರಕರಣಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಳು. ಪೊಲೀಸ್ ಇಲಾಖೆ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದೆ.
ಹತ್ತು ವರ್ಷದಲ್ಲಿ 200ಕ್ಕೂ ಅಧಿಕ ಕೇಸ್ನ ತನಿಖೆಗೆ ನೆರವಾಗಿದ್ದ ಆಕೆ 47 ಪ್ರಕರಣಗಳಲ್ಲಿ ತಾನೇ ಖುದ್ದು ಆರೋಪಿಗಳು ಖೆಡ್ಡಾಕ್ಕೆ ಬಿಳುವಂತೆ ಮಾಡಿದ್ದಳು. ಹೀಗೆ ಪೊಲೀಸ್ ಇಲಾಖೆಗೆ ಹೀರೋ ಆಗಿದ್ದ ಆಕೆ ಇನ್ನು ನೆನಪು ಮಾತ್ರ. ವಯೋ ಸಹಜ ಅನಾರೋಗ್ಯದಿಂದ ಶ್ವಾನ ರಕ್ಷಾ ಅಗಲಿದ್ದಾಳೆ. ಎಲ್ಲರ ರಕ್ಷಕಿಯಾಗಿದ್ದ ರಕ್ಷಾಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಕಣ್ಣಿರಿನ ವಿದಾಯ ಹೇಳಲಾಗಿದೆ.
ಹಾಸನ ಜಿಲ್ಲೆಯ ಪೊಲೀಸ್ ಇಲಾಖೆಯ ಕ್ರೈಂ ವಿಭಾಗದಲ್ಲಿ ತನ್ನದೇ ಛಾಪು ಮೂಡಿಸಿದ್ದ ಡಾಬರ್ ಮನ್ ತಳಿಯ ಶ್ವಾನ ರಕ್ಷಾ ನಿನ್ನೆ ಅನಾರೋಗ್ಯದಿಂದ ಅಸುನೀಗಿದೆ. 2015ರಲ್ಲಿ ಇಲಾಖೆಗೆ ಸೇರಿದ್ದ ರಕ್ಷಾ, ಒಂದು ವರ್ಷ ಬೆಂಗಳೂರಿನ ಆಡುಗೋಡಿ ಶ್ವಾನ ತರಬೇತಿ ಕೇಂದ್ರದಲ್ಲಿ ಕ್ರೈಂ ಪತ್ತೆ ತರಬೇತಿ ಪಡೆದುಕೊಂಡಿದ್ದಳು.
ಕಳೆದ ಹತ್ತು ವರ್ಷಗಳಲ್ಲಿ ಬರೋಬ್ಬರಿ 200ಕ್ಕೂ ಹೆಚ್ಚು ಪ್ರಕರಣಗಳ ತನಿಖೆಗೆ ಬಳಸಿಕೊಳ್ಳಲಾಗಿತ್ತು. ಇದರಲ್ಲಿ 2022ರ ಮಾರ್ಚ್ 16ರಂದು ಹಾಸನ ತಾಲ್ಲೂಕಿನ ದೊಡ್ಡಪುರದ ಗ್ರಾಮದ ಒಂಟಿ ಮನೆಯಲ್ಲಿ ನಡೆದಿದ್ದ ಮಹಿಳೆ ರೇವತಿ (35) ಹತ್ಯೆ ಪ್ರಕರಣದಲ್ಲಿ ಯಾವುದೆ ಸುಳಿವು ಇರಲಿಲ್ಲ. ಸ್ಥಳಕ್ಕೆ ಬಂದ ರಕ್ಷಾ ಎಲ್ಲೆಡೆ ಪರಿಶೀಲನೆ ಮಾಡಿ ಸೀದಾ ಗ್ರಾಮದೊಳಗೆ ಹೋಗಿ ನೀಡಿದ್ದ ಸುಳಿವು, ಒಂದೇ ದಿನದಲ್ಲಿ ಆರೋಪಿ ಪತ್ತೆಯಾಗುವಂತೆ ಮಾಡಿತ್ತು.
ಇದೇ ವರ್ಷ ಡಿಸೆಂಬರ್ 24ರಂದು ಹೊಳೆನರಸೀಪುರ ತಾಲ್ಲೂಕಿನ ಗಂಗೂರು ಗ್ರಾಮದ ಪಾರ್ವತಮ್ಮರನ್ನ ಅವರ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬ ಮನೆಯಲ್ಲಿ ಟಿ ಕುಡಿದು ಮಹಿಳೆಯನ್ನ ಕೊಂದು ಎಸ್ಕೇಪ್ ಆಗಿದ್ದ. ಸ್ಥಳಕ್ಕೆ ಭೇಟಿ ಕೊಟ್ಟಿದ್ದ ರಕ್ಷಾ ಕೇಸ್ ಪತ್ತೆಗೆ ಮಹತ್ತರ ಕೊಡುಗೆ ನೀಡಿದ್ದಳು. ಹೀಗೆ 47 ಕೇಸ್ಗಳ ಪತ್ತೆಗೆ ಮಹತ್ತರವಾಗಿ ನೆರವಾಗಿದ್ದ ರಕ್ಷಾ ಕಳೆದ ಕೆಲ ತಿಂಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ನಿನ್ನೆ ರಾತ್ರಿ ಮೃತಪಟ್ಟಿದ್ದಾಳೆ.
ಹಾಸನದ ಪೊಲೀಸ್ ಮೈದಾನದಲ್ಲಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವ ಸಲ್ಲಿಸುವ ಮೂಲಕ ಅಂತಿಮ ವಿದಾಯ ಹೇಳಿದ್ದು, ಅಗಲಿದ ರಕ್ಷಾ ಕಾರ್ಯ ನೆನೆದು ಪೊಲೀಸರು ಕಣ್ಣೀರಿಟ್ಟರು.
ಕೇವಲ ತನಿಖೆ ಮಾತ್ರವಲ್ಲದೇ ಇಲಾಖೆಯಿಂದ ನಡೆಯುವ ಪೊಲೀಸ್ ಶ್ವಾನಗಳ ಡ್ಯೂಟಿ ಮೀಟ್ನಲ್ಲಿ ವಲಯಮಟ್ಟದಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ, ರಾಜ್ಯಮಟ್ಟದಲ್ಲಿ ಬೆಳ್ಳಿ ಪದಕ ಪಡೆದು ಹಾಸನ ಜಿಲ್ಲಾ ಪೊಲೀಸ್ ಇಲಾಖೆಗೆ ಹಿರಿಮೆ ತಂದಿತ್ತು.