ನವದೆಹಲಿ: ಉದ್ಯಮ ಲೋಕದ ದಿಗ್ಗಜ ರತನ್ ಟಾಟಾ ಕೆಲ ದಿನಗಳ ಹಿಂದೆ ನಿಧನರಾದರು. ಟಾಟಾ ಅವರು ಇನ್ನಿಲ್ಲ ಎಂಬ ಸುದ್ದಿ ಕೇಳಿ ಇಡೀ ಭಾರತ ಕಣ್ಣೀರು ಹಾಕಿದೆ. ಇಡೀ ದೇಶವೇ ಅವರಿಗೆ ಅಂತಿಮ ನಮನ ಸಲ್ಲಿಸಿತು. ಈ ನಡುವೆ ವ್ಯಕ್ತಿಯೊಬ್ಬ ತನ್ನ ಎದೆಯ ಮೇಲೆ ರತನ್ ಟಾಟಾ ಅವರ ಮುಖದ ಟ್ಯಾಟೂ ಹಾಕಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಂಬೈನ ಟ್ಯಾಟೂ ಕಲಾವಿದ ಮಹೇಶ್ ಚೌಹಾಣ್, ತಮ್ಮ ಅಂಗಡಿಗೆ ಬಂದ ವ್ಯಕ್ತಿಯೊಬ್ಬರ ಕಣ್ಣೀರ ಕತೆಯನ್ನು ಬಹಿರಂಗಪಡಿಸಿದ್ದಾರೆ. ಆ ವ್ಯಕ್ತಿಯ ಹೆಸರನ್ನು ಚೌಹಾಣ್ ಬಹಿರಂಗಪಡಿಸಿಲ್ಲ. ಆದರೆ, ಅವರು ಹೇಳಿದ ಕತೆ ಮಾತ್ರ ಮನಕಲುಕುವಂತಿದೆ. ಆ ವ್ಯಕ್ತಿ ರತನ್ ಟಾಟಾ ಅವರ ಟ್ಯಾಟೂವನ್ನು ಯಾರನ್ನೋ ಮೆಚ್ಚಿಸಲು ಹಾಕಿಸಿಕೊಂಡಿದ್ದಲ್ಲ ಎಂದು ಮಹೇಶ್ ಚೌಹಾಣ್ ಹೇಳಿದ್ದಾರೆ.
ನನ್ನ ಸ್ನೇಹಿತರೊಬ್ಬರು ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಆದರೆ, ಚಿಕಿತ್ಸೆ ಕೊಡಿಸಲು ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಯಾವುದೇ ಆಸ್ಪತ್ರೆಗಳಿಗೆ ಹೋಗಿ ಬಂದರೂ ಖರ್ಚು ಭರಿಸಲಾಗದಷ್ಟು ಕಷ್ಟವಾಗಿತ್ತು. ದೊಡ್ಡ ಖರ್ಚು ಬಂದರೆ ಎಷ್ಟೇ ಬಲಶಾಲಿಗಳು ಕೂಡ ಧೈರ್ಯವನ್ನು ಕಳೆದುಕೊಳ್ಳುತ್ತಾರೆ ಎಂಬುದು ನಿಮಗೆ ಗೊತ್ತು. ಈ ಸಂದರ್ಭದಲ್ಲಿ ಯಾರೋ ಒಬ್ಬರು ಟಾಟಾ ಮೆಮೋರಿಯಲ್ ಆಸ್ಪತ್ರೆಗೆ ಹೋಗಲು ಹೇಳಿದರು. ನಂತರ ನಾವು ಟಾಟಾ ಟ್ರಸ್ಟ್ಗೆ ಹೋಗಿ ಖರ್ಚಿನ ಬಗ್ಗೆ ಕೇಳಿದಾಗ, ಯಾವುದೇ ಶುಲ್ಕ ಕಟ್ಟಬೇಕಿಲ್ಲ ಎಂದರು. ಇದನ್ನು ಕೇಳಿ ಒಂದು ಕ್ಷಣ ನಾನು ದಿಗ್ಭ್ರಮೆಗೊಂಡೆ ಎಂದು ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿ ಹೇಳಿದ್ದಾರೆ.