ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17 ವರ್ಷಗಳ ಬಳಿಕ 18ನೇ ಆವೃತ್ತಿಯಲ್ಲಿ ಮೊದಲ ಐಪಿಎಲ್ ಟ್ರೋಫಿ ಗೆದ್ದುಕೊಂಡಿತು. ಜೂನ್ 3ರಂದು ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮಣಿಸಿ ‘ಈ ಸಲ ಕಪ್ ನಮ್ದು’ ಎಂಬ ಘೋಷವಾಕ್ಯವನ್ನು ನಿಜವಾಗಿಸಿತು. ಬಳಿಕ ತುಂಬಾ ಬೆಳವಣಿಗೆಗಳು ಆದ್ವು. ಇದೀಗ ಮುಂದಿನ ಸೀನನ್ನಿಂದ ರಾಯಲ್ ಟೀಂ ತವರು ಮೈದಾನ ಚಿನ್ನಸ್ವಾಮಿ ಸ್ಟೇಡಿಯಂನಿಂದ ಹೊರಗುಳಿಯಲಿದೆ

ಫೈನಲ್ ಪಂದ್ಯ ಅಹಮದಬಾದ್ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜೂನ್ 3ರಂದು ನಡೆದಿದ್ದು, ಈ ವೇಳೆ ಆರ್ಸಿಬಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಮೊದಲ ಐಪಿಎಲ್ ಟ್ರೋಫಿಗೆ ಮುಟ್ಟಿಡುವ ಮೂಲಕ ಕಪ್ ಇಲ್ಲ ಎನ್ನುವ ಕೊರಗಿಗೆ ತೆರೆ ಎಳೆಯಿತು. ಆ ದಿನ ಇಡೀ ದೇಶವೇ ಆರ್ಸಿಬಿ ತಂಡದ ಗೆಲುವನ್ನು ಸಂಭ್ರಮಿಸಿತು.
ಮಾರನೇ ದಿನ ಜೂನ್ 4ರಂದು ಬೆಂಗಳೂರಿನಲ್ಲಿ ವಿಜಯೋತ್ಸವ ಇಟ್ಟುಕೊಳ್ಳಲಾಗಿದ್ದು, ಈ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡರು. ಈ ದುರಂತ ಆರ್ಸಿಬಿಗೆ ಕಪ್ಪುಚುಕ್ಕೆಯಾಗಿ ಉಳಿದುಬಿಟ್ಟಿತು. ಘಟನೆ ಸಂಬಂಧ ಕರ್ನಾಟಕ ಸರ್ಕಾರ ಈಗಾಗಲೇ ಆರ್ಸಿಬಿ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ)ಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಒಪ್ಪಿಗೆ ಸೂಚಿಸಿದೆ. ಆದರೆ, ಕೋರ್ಟ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಎಂದು ಕಾದುನೋಡಬೇಕಿದೆ. ಆರ್ಸಿಬಿ ಐಪಿಎಲ್ನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವಾಗಿದೆ. ಅದರಲ್ಲೂ, ಬೆಂಗಳೂರಿನಲ್ಲಿ ಮ್ಯಾಚ್ ನಡೆದರೆ, ಅಪಾರ ಅಭಿಮಾನಿಗಳ ದಂಡೇ ನೆರೆಯುತ್ತದೆ. ಇನ್ನೂ ಟ್ರೋಫಿ ಗೆದ್ದರೆ, ಇದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆಯುತ್ತಾರೆ ಎನ್ನುವುದಕ್ಕೆ ಈ ಬಾರಿ ನಡೆದ ದುರಂತವೇ ಸಾಕ್ಷಿ. ಆದ್ದರಿಂದ 2026ರಿಂದ ಐಪಿಎಲ್ ಪಂದ್ಯಗಳು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವುದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಆರ್ಸಿಬಿಯು ಐಪಿಎಲ್ 2025 ಟ್ರೋಫಿ ಗೆದ್ದ ಮಾರನೇ ದಿನ ಬೆಂಗಳೂರಿನಲ್ಲಿ ವಿಜಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಊಹೆಗೂ ಮೀರಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಕಾಲ್ತುಳಿತ ಸಂಭವಿಸಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಹಿನ್ನೆಲೆ ಮಂದಿನ ಬಾರಿ ಬೆಂಗಳೂರಿನಲ್ಲಿ ಪಂದ್ಯ ನಡೆಯುವುದೇ ಡೌಟ್ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, ಜೂನ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಕ ಸಂಭವಿಸಿದ ಕಾಲ್ತುಳಿತ ದುರಂತದ ನಂತರ, ಈ ಕ್ರೀಡಾಂಗಣದಲ್ಲಿ ಪ್ರಮುಖ ಕಾರ್ಯಕ್ರಮಗಳು ಅಥವಾ ಉನ್ನತ ಮಟ್ಟದ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಅನರ್ಹವೆಂದು ಘೋಷಿಸಲಾಗಿದೆ. ಇದರ ಪರಿಣಾಮವಾಗಿ, ಮುಂಬರುವ ಐಪಿಎಲ್ ಋತುವಿನಲ್ಲಿ ಆರ್ಸಿಬಿ ತನ್ನ ತವರು ಮೈದಾನದಲ್ಲಿ ಆಡಲು ಸಾಧ್ಯ ಆಗುವುದಿಲ್ಲ. ಐಪಿಎಲ್ 2026ಕ್ಕೆ ಆರ್ಸಿಬಿಗೆ ಹೊಸ ತವರು ಮೈದಾನವನ್ನು ನೀಡಲಾಗುವುದು ಎನ್ನಲಾಗುತ್ತಿದೆ. ಐಪಿಎಲ್ನಲ್ಲಿ ಆರ್ಸಿಬಿಗೆ ತವರು ಮೈದಾನ ಅಂದ್ರೆ, ಅದು ಬೆಂಗಳೂರು ಚಿನ್ನಸ್ವಾಮಿ ಅಂತಾಗಿತ್ತು. ಇದೀಗ ಇದರ ಬದಲಿಗೆ ಹೊಸ ತವರು ಮೈದಾನವನ್ನು ನೀಡಲಾಗುವುದು ಎನ್ನುವ ಮಾಹಿತಿ ಇದ್ದು, ಒಂದು ವೇಳೆ ಹೀಗಾದ್ರೆ ಪಂದ್ಯ ವೀಕ್ಷಣೆ ಮಾಡುವ ಪ್ರೇಕ್ಷಕ ಪ್ರಭುಗಳು ಕಡಿಮೆಯಾದರೂ ಆಶ್ಚರ್ಯವಿಲ್ಲ