ಬೆಂಗಳೂರು : ಪರೀಕ್ಷಾ ಸಮಯದಲ್ಲಿ 15 ನಿಮಿಷ ಕಡಿತಗೊಳಿಸಿ ದ್ವಿತೀಯ ಪಿಯುಸಿ ಬೋರ್ಡ್ ಹೊಸ ಪ್ರಯೋಗಕ್ಕೆ ಕೈಹಾಕಿದೆ. ಈ ನಿಯಮವೂ 2024-25 ಶೈಕ್ಷಣಿಕ ಸಾಲಿನ ಪರೀಕ್ಷೆಯಿಂಧಲೇ ಜಾರಿ ಮಾಡಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಮಯ ಕಡಿತಗೊಳಿಸಿ ಸುತ್ತೋಲೆ ಹೊರಡಿಸಿದೆ.
ಈ ಮೊದಲು ವಿದ್ಯಾರ್ಥಿಗಳಿಗೆ ಉತ್ತರ ಬರೆಯಲು 3 ಗಂಟೆ 15 ನಿಮಿಷ ಸಮಯವಿತ್ತು ಅಂದರೆ 3 ಗಂಟೆ ಉತ್ತರ ಬರೆಯಲು ಮತ್ತು 15 ನಿಮಿಷಗಳು ಪ್ರಶ್ನೆ ಪತ್ರಿಕೆ ಓದಲು ಸಮಯ ನೀಡಲಾಗುತ್ತಿತ್ತು. ಹೊಸ ನಿಯಮದ ಪ್ರಕಾರ ಉತ್ತರ ಬರೆಯಲು 2 ಗಂಟೆ 45 ನಿಮಿಷ ಮತ್ತು 15 ನಿಮಿಷ ಪ್ರಶ್ನೆ ಪತ್ರಿಕೆ ಓದಲು ಅವಕಾಶ ನೀಡಲಾಗಿದೆ.
ಸಮಯ ಕಡಿತಕ್ಕೆ ಬೋರ್ಡ್ ನೀಡಿದ ಕಾರಣ ಏನು..?
ಈ ಮುನ್ನಾ 3 ಗಂಟೆ 15 ನಿಮಿಷ ಇದ್ದ ಸಮಯದಲ್ಲಿ 100 ಅಂಕಗಳಿಗೆ ಪ್ರಶ್ನೆ ಪತ್ರಿಕೆ ಕೊಡಲಾಗುತ್ತಿತ್ತು. ಆದರೆ ಈಗ 70/80 ಅಂಕಗಳಿಗೆ ಲಿಖಿತ ಪರೀಕ್ಷೆ ಇದ್ದು, ಉಳಿದ ಅಂಕಗಳು ಇಂಟರ್ನಲ್ ಅಸೆಸ್ಮೆಂಟ್ಗೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 15 ನಿಮಿಷ ಉತ್ತರ ಬರೆಯಲು ಕಡಿತ ಮಾಡಲಾಗಿದೆ ಎನ್ನಲಾಗಿದೆ.
2023-24ನೇ ಸಾಲಿನಿಂದ ಪ್ರಾಯೋಗಿಕ ಪರೀಕ್ಷೆ ಹಾಗೂ ಆಂತರಿಕ ಮೌಲ್ಯಮಾಪನಕ್ಕೆ ಪ್ರತ್ಯೇಕ ಅಂಕ ನಿಗದಿ ಮಾಡಲಾಗಿದೆ. ಆದ್ದರಿಂದ ಲಿಖಿತ ಪರೀಕ್ಷೆಯ ಅಂಕಗಳನ್ನು ಕಡಿತ ಮಾಡಲಾಗಿತ್ತು. ಆದರೆ, ಪರೀಕ್ಷಾ ಅವಧಿ ಕಡಿತಗೊಳಿಸಿರಲಿಲ್ಲ. ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಗೃಹ ವಿಜ್ಞಾನ, ಭೌತಶಾಸ್ತ್ರ, ರಸಾಯನ ಶಾಸ್ತ್ರ ಸೇರಿದಂತೆ ಪ್ರಾಯೋಗಿಕ ಪರೀಕ್ಷೆಯ ವಿಷಯಗಳಲ್ಲಿ ಲಿಖಿತ ಪರೀಕ್ಷೆಯನ್ನು 70 ಅಂಕ ಹಾಗೂ ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಲ್ಲಿ 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು.
ವಿದ್ಯಾರ್ಥಿಗಳು 80 ಅಂಕಗಳಿಗೆ ಉತ್ತರಿಸಬೇಕಾದ ವಿಷಯಗಳ ಪ್ರಶ್ನೆಪತ್ರಿಕೆಗಳು ಒಟ್ಟು 120 ಅಂಕಗಳ ಪ್ರಶ್ನೆಗಳನ್ನು ಹೊಂದಿರಲಿದ್ದು, ಅವಧಿಗಳಲ್ಲಿ 80 ಅಂಕಗಳಿಗಷ್ಟೇ ಉತ್ತರಿಸಬೇಕು. 70 ಅಂಕಗಳಿಗೆ ಉತ್ತರಿಸಬೇಕಾದ ವಿಷಯಗಳ ಪ್ರಶ್ನೆಪತ್ರಿಕೆಗಳು 105 ಅಂಕಗಳ ಪ್ರಶ್ನೆಗಳನ್ನು ಹೊಂದಿರಲಿದ್ದು, ಅವಧಿಗಳಲ್ಲಿ 70 ಅಂಕಗಳಿಗಷ್ಟೇ ಉತ್ತರಿಸಬೇಕು ಎಂದು ಮಂಡಳಿ ಸುತ್ತೋಲೆಯಲ್ಲಿ ತಿಳಿಸಿದೆ.