ನವದೆಹಲಿ: ಖಾದ್ಯ ತೈಲ ವಲಯದಲ್ಲಿ ಹೆಚ್ಚಿನ ನಿಯಂತ್ರಣ, ಮೇಲ್ವಿಚಾರಣೆ ಮತ್ತು ಪಾರದರ್ಶಕತೆಗಾಗಿ ಕೇಂದ್ರ ಸರ್ಕಾರ 2011ರ VOPPA ಆದೇಶಕ್ಕೆ ತಿದ್ದುಪಡಿ ತಂದಿದ್ದು, ಪಾಲಿಸದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ. ತರಕಾರಿ ತೈಲ ಉತ್ಪನ್ನಗಳು, ಉತ್ಪಾದನೆ ಮತ್ತು ಲಭ್ಯತೆ ಆದೇಶ-2011ಕ್ಕೆ ಪ್ರಮುಖ ತಿದ್ದುಪಡಿಗೆ ಸೂಚಿಸಲಾಗಿದೆ. ತಿದ್ದುಪಡಿ ಮಾಡಲಾದ VOPPA ಆದೇಶ-2025 ಭಾರತದಲ್ಲಿ ಖಾದ್ಯ ತೈಲ ವಲಯದಾದ್ಯಂತ ನಿಯಂತ್ರಕ, ಮೇಲ್ವಿಚಾರಣೆ ಮತ್ತು ಪಾರದರ್ಶಕತೆ ಗುರಿ ಹೊಂದಿದೆ ಎಂದು ಜೋಶಿ ಹೇಳಿದ್ದಾರೆ.
VOPPA ತಿದ್ದುಪಡಿ ಆದೇಶದಲ್ಲೇನಿದೆ?
VOPPA ತಿದ್ದುಪಡಿ ಆದೇಶದ ಪ್ರಕಾರ, ಖಾದ್ಯ ತೈಲ ಪೂರೈಕೆಯಲ್ಲಿ ಭಾಗಿಯಾಗಿರುವ ಎಲ್ಲಾ ಖಾದ್ಯ ತೈಲ ತಯಾರಕರು, ಸಂಸ್ಕರಣಾ ಘಟಕಗಳು, ಮಿಶ್ರಣಕಾರರು, ಮರು-ಪ್ಯಾಕರ್‌ಗಳು ಮತ್ತಿತರ ಪಾಲುದಾರರ ನೋಂದಣಿ ಕಡ್ಡಾಯವಾಗಿದೆ. ಅಲ್ಲದೇ, ಆನ್‌ಲೈನ್ ಪೋರ್ಟಲ್ ಮೂಲಕ ಮಾಸಿಕ ಉತ್ಪಾದನೆ ಮತ್ತು ಸ್ಟಾಕ್ ರಿಟರ್ನ್ ಸಲ್ಲಿಕೆ ಸಹ ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲಾ ಖಾದ್ಯ ತೈಲ ಸಂಬಂಧಿತ ಘಟಕಗಳು https://www.nsws.gov.in ನಲ್ಲಿ ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆ ಮೂಲಕ ನೋಂದಾಯಿಸಿಕೊಳ್ಳಬೇಕು. ನಂತರ, ಘಟಕಗಳು ಮಾಸಿಕ ಉತ್ಪಾದನೆ, ಸ್ಟಾಕ್ ಮತ್ತು ಲಭ್ಯತೆಯ ರಿಟರ್ನ್‌ಗಳನ್ನು https://www.edibleoilindia.in ಮೂಲಕ ಸಲ್ಲಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.
ಖಾದ್ಯ ತೈಲ ವಲಯದಲ್ಲಿ ನಿಖರ ದತ್ತಾಂಶ ಸಂಗ್ರಹಣೆ, ನೈಜ-ಸಮಯದ ಮೇಲ್ವಿಚಾರಣೆ ಮತ್ತು ನೀತಿಗಳ ಸುಧಾರಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರ್ಣಾಯಕ ಹೆಜ್ಜೆಯಿರಿಸಿದೆ. ತಪಾಸಣೆ ಮತ್ತು ಕ್ಷೇತ್ರ ಪರಿಶೀಲನೆಗೆ ಯೋಜಿಸಿದ್ದು, ಎಣ್ಣೆ ಉತ್ಪನ್ನಗಳು, ಉತ್ಪಾದನೆ ಮತ್ತು ಲಭ್ಯತೆ ಬಗೆಗಿನ ಕ್ರಮವನ್ನು ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ
VOPPA ತಿದ್ದುಪಡಿ ಆದೇಶ-2025 ಅನ್ನು ಪಾಲಿಸದಿದ್ದರೆ, ನೋಂದಣಿ, ರಿಟರ್ನ್ ಸಲ್ಲಿಸಲು ವಿಫಲವಾದ ತೈಲ ಘಟಕಗಳ ವಿರುದ್ಧ ದಂಡ ವಿಧಿಸುವ ಜತೆಗೆ VOPPA ಆದೇಶ ಉಲ್ಲಂಘನೆ ಎಂದು ಪರಿಗಣಿಸಿ ಕಾಯ್ದೆ 2008ರ ನಿಬಂಧನೆಯಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಕೆ ನೀಡಿದ್ದಾರೆ.
VOPPA ತಿದ್ದುಪಡಿ ಆದೇಶದ ಅನುಸರಣೆ ಕೇವಲ ನಿಯಂತ್ರಕ ಅವಶ್ಯಕತೆಯಲ್ಲ. ಇದು ಭಾರತದ ಆಹಾರ ಭದ್ರತಾ ಮೂಲಸೌಕರ್ಯಕ್ಕೆ ನಿರ್ಣಾಯಕ ಕೊಡುಗೆಯಾಗಿದೆ. ಖಾದ್ಯ ತೈಲ ವಲಯದಲ್ಲಿ ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕತೆಯನ್ನು ಬಲಪಡಿಸುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
For More Updates Join our WhatsApp Group :
