ರೇಣುಕಾಸ್ವಾಮಿ ಹತ್ಯೆ ಕೇಸ್​: ಪೊಲೀಸರು ಸ್ವಲ್ಪ ಎಚ್ಚರ ತಪ್ಪಿದ್ದರೂ ಪ್ರಕರಣ ದಾರಿ ತಪ್ಪುತ್ತಿತ್ತು

ಬೆಂಗಳೂರು: ”ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇದುವರೆಗೂ 17 ಜನ ಆರೋಪಿಗಳನ್ನ ಬಂಧಿಸಲಾಗಿದೆ” ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಇಂದು (ಮಂಗಳವಾರ) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ”ತನಿಖಾ ಹಂತದಲ್ಲಿ ಹೆಚ್ಚಿನ ವಿವರಗಳನ್ನ ಹಂಚಿಕೊಳ್ಳಲು ಸಾಧ್ಯವಿಲ್ಲ. ಆದರೆ, ಪ್ರಕರಣವನ್ನ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಮೂಲಕ ಮೃತನ ಕುಟುಂಬಸ್ಥರಿಗೆ ನ್ಯಾಯ ಒದಗಿಸುವ ಕೆಲಸವನ್ನ ಮಾಡಲಿದ್ದೇವೆ” ಎಂದರು.

”ಪೊಲೀಸರ ನಿಷ್ಪಕ್ಷಪಾತ ಸಮಯಪ್ರಜ್ಞೆಯಿಂದ ಈ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಸ್ವಲ್ಪ ನಿರ್ಲಕ್ಷ್ಯವಹಿಸಿದ್ದರೂ ಸಹ ಪ್ರಕರಣ ಸಮಸ್ಯಾತ್ಮಕವಾಗಿ ಆಗುವ ಸಂಭವವಿತ್ತು. ಪೊಲೀಸ್ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುವ ಮೂಲಕ ತ್ವರಿತವಾಗಿ ಅವಶ್ಯಕ ಸಾಕ್ಷ್ಯಗಳನ್ನ ಕಲೆಹಾಕಿದ್ದಾರೆ. ಇದೊಂದು ಅತ್ಯಂತ ಹೀನ ಮತ್ತು ಹೇಯ ಕೃತ್ಯವಾಗಿದ್ದು, ಗಂಭೀರ ಪ್ರಕರಣವಾಗಿದೆ. ವ್ಯಕ್ತಿಯನ್ನು ಅತ್ಯಂತ ದೌರ್ಜನ್ಯಯುತವಾಗಿ ಹತ್ಯೆ ಮಾಡಲಾಗಿದೆ‘‘ ಎಂದು ಆಯುಕ್ತರು ಹೇಳಿದ್ದಾರೆ.

ಮೃತ ವ್ಯಕ್ತಿಯ ಕುಟುಂಬಸ್ಥರಿಗೆ ನಾವು ನ್ಯಾಯ ಒದಗಿಸಬೇಕಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ಪ್ರಕರಣ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದಾಗ ಸಮರ್ಪಕವಾಗಿ ಅಗತ್ಯ ಸಾಕ್ಷ್ಯಗಳನ್ನು ಒದಗಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ದಯಾನಂದ ತಿಳಿಸಿದರು.

ಠಾಣೆಯ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಹಾಗೂ ಠಾಣೆಯ ಬಳಿ ಶಾಮಿಯಾನ ಹಾಕಿರುವುದರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆಯುಕ್ತರು, ”ಪ್ರತಿಯೊಂದಕ್ಕೂ ಒಂದು ಕಾರಣವಿರುತ್ತದೆ. ಆರೋಪಿಗಳಲ್ಲಿ ಸೆಲೆಬ್ರಿಟಿಗಳಿರುವುದರಿಂದ ಹೆಚ್ಚಿನ ಕುತೂಹಲ ಕಂಡು ಬರುತ್ತಿರುವುದರಿಂದ ತನಿಖೆಯ ಭಾಗವಲ್ಲದ ಅನೇಕ ಉತ್ಪ್ರೇಕ್ಷೆ, ಊಹಾಪೋಹಗಳು ಕಂಡು ಬರುತ್ತಿವೆ. ತಾಳ್ಮೆಯಿಂದ ಸಹಕರಿಸಿದರೆ ಪ್ರಕರಣವನ್ನ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿದೆ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Leave a Reply

Your email address will not be published. Required fields are marked *