ಬೆಂಗಳೂರು – ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ಸಹೋದರರ ಆಸ್ತಿಯ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಲಿ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ನನ್ನ ಆಸ್ತಿಯ ಹಿನ್ನಲೆಯನ್ನು ಪ್ರಸ್ತಾಪ ಮಾಡಿ ಪ್ರಶ್ನೆ ಕೇಳಿದ್ದಾರೆ. ಅವರಿಗೆ ಅಧಿಕಾರ ಇದೆ. ಮಾಹಿತಿ ಕೇಳಲಿ. ನನ್ನ ಕುಟುಂಬದ ಸದಸ್ಯರ ಆಸ್ತಿಪಟ್ಟಿ ಕೇಳಿದ್ದಾರೆ.
ಎಲ್ಲವನ್ನೂ ಕೊಡಲು ನಾನು ಸಿದ್ಧ. ಯಾವುದೇ ಮುಚ್ಚುಮರೆ ಇಲ್ಲ. ಆದರೆ ಅದಕ್ಕೂ ಮೊದಲು ಕುಮಾರಸ್ವಾಮಿ ಅವರ ಸಹೋದರರ ಆಸ್ತಿಯ ಲೆಕ್ಕ ಕೊಡಲಿ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಸಹೋದರ ಯಾವ ರೀತಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಲೆಕ್ಕಾಚಾರ ಆಗಬೇಕಿದೆ. ಕುಮಾರಸ್ವಾಮಿಯ ಹಗರಣಗಳಿಗೆ ಉತ್ತರ ಕೊಡುವಂತೆ ನಾವು ಜನಾಂದೋಲನ ಸಮಾವೇಶ ನಡೆಸಿ ಪ್ರಶ್ನೆ ಕೇಳುತ್ತಿದ್ದೇವೆ. ಅದಕ್ಕೆ ಈವರೆಗೂ ಉತ್ತರ ಕೊಟ್ಟಿಲ್ಲ. ಕುಮಾರಸ್ವಾಮಿ ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ. ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭ್ರಷ್ಟಾಚಾರದ ಪಿತಾಮಹ ಎಂದು ಹೇಳಿದ್ದಾರೆ. ಅವರ ಅಪ್ಪನನ್ನು ಏಕೆ ಜೈಲಿಗೆ ಕಳುಹಿಸಿದ್ದರು?, ರಾಜೀನಾಮೆ ಏಕೆ ಕೊಡಿಸಿದ್ದರು? ಎಂಬುದರ ಬಗ್ಗೆ ಪಿತಾಮಹ ವಿಜಯೇಂದ್ರ ಮೊದಲು ಉತ್ತರ ಹೇಳಲಿ.
ನಂತರ ಅವರದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಗೂಳಿಹಟ್ಟಿ ಶೇಖರ್ ಕೇಳುತ್ತಿರುವ ಪ್ರಶ್ನೆಗಳಿಗೆ ಇಂದು ಚನ್ನಪಟ್ಟಣದ ಪಾದಯಾತ್ರೆಯಲ್ಲಿ ಉತ್ತರ ಕೊಡಲಿ ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಏಕೆ ಹಣ ಬಿಡುಗಡೆ ಮಾಡಿಸಲಿಲ್ಲ ಎಂಬುದಕ್ಕೆ ಸ್ಪಷ್ಟನೆ ನೀಡಬೇಕಿದೆ. ಈ ನಿಟ್ಟಿನಲ್ಲಿ ನಾವು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡಲಿ ಎಂದು ಅವರು ಆಗ್ರಹಿಸಿದರು.