ದೇವನಹಳ್ಳಿಯಲ್ಲಿ 24 ಲಕ್ಷ ರೂ ಲೂಟಿ, 9 ಮಂದಿ ಬಂಧನ.
ದೇವನಹಳ್ಳಿ: ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಸೋಗಿನಲ್ಲಿ ಎಂಟ್ರಿಕೊಟ್ಟು 24 ಲಕ್ಷ ರೂ ಹಣವನ್ನ ದೋಚಿ ಎಸ್ಕೇಪ್ ಆಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದ ಪ್ರಸನ್ನಹಳ್ಳಿ ರಸ್ತೆಯಲ್ಲಿ ನಡೆದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿದಂತೆ 12 ಜನರ ಪೈಕಿ 09 ಆರೋಪಿಗಳನ್ನ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕೃಷ್ಣಕುಮಾರ್, ವೇಣುಗೋಪಾಲ್, ಸಂಪಂಗಿ ರಾಮ, ಅಹಮದ್, ನಾರಾಯಣಸ್ವಾಮಿ, ವೆಂಕಟೇಶ, ಮುರುಗೇಶನ್, ಶಿವ, ಲತೀಪ್ ಬಂಧಿತ ಆರೋಪಿಗಳು. ಬಂಧಿತರಿಂದ ಹಣವನ್ನು ಜಪ್ತಿ ಮಾಡಲಾಗಿದೆ.
ನಡೆದಿದ್ದೇನು?
ಶಂಕರಪ್ಪ ಎಂಬುವವರಿಗೆ ಹಣ ತ್ರಿಬಲ್ ಮಾಡಿಕೊಡುವುದಾಗಿ ಹೇಳಿ ಎ1 ಆರೋಪಿ ಕೃಷ್ಣ ಕುಮಾರ್ ಫೋನ್ ಮಾಡಿ ಕರೆಸಿಕೊಂಡಿದ್ದಾನೆ. ಅದರಂತೆ ಶಂಕರಪ್ಪ ಚಿನ್ನಾಭರಣ ಅಡವಿಟ್ಟು 24 ಲಕ್ಷ ರೂ ಹಣವನ್ನು ತಂದಿದ್ದಾರೆ. ಇತ್ತ ಮೊದಲೇ ಮಾಡಿಕೊಂಡಿದ್ದ ಪ್ಲ್ಯಾನ್ನಂತೆ ಖಾಸಗಿ ಕಾರಿನಲ್ಲಿ ಕೃಷ್ಣ ಕುಮಾರ್ ಸಹಚರರು ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಹೆಸರಿನಲ್ಲಿ ಖಾಸಗಿ ಕಾರ್ಗೆ ಬೋರ್ಡ್ ಹಾಕಿಕೊಂಡು ಅಧಿಕಾರಿಗಳ ಸೋಗಿನಲ್ಲಿ ಬಂದು 24 ಲಕ್ಷ ರೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಹಣ ಎಗರಿಸಿದ ನಂತರ ಎ1 ಆರೋಪಿ ಕೃಷ್ಣಕುಮಾರ್ ಪೊಲೀಸ್ ಠಾಣೆಗೆ ಬಂದು ತಾನೇ ದೂರು ನೀಡಿದ್ದ. ಪೊಲೀಸರ ವಿಚಾರಣೆ ವೇಳೆ ದೂರು ನೀಡಿದ್ದ ಆರೋಪಿಯೇ ದರೋಡೆಕೋರ ಎನ್ನುವುದು ಬಯಲಾಗಿದೆ. ಸದ್ಯ ದೇವನಹಳ್ಳಿ ಠಾಣೆ ಪೊಲೀಸರು 12 ಜನರಲ್ಲಿ 09 ಆರೋಪಿಗಳನ್ನ ಬಂಧಿಸಿದ್ದಾರೆ.
For More Updates Join our WhatsApp Group :




