ಬೆಂಗಳೂರು: ಪಂಚೆಯುಟ್ಟ ರೈತನಿಗೆ ಪ್ರವೇಶ ನಿರಾಕರಿಸುವ ಮೂಲಕ ವಿವಾದಕ್ಕೀಡಾಗಿದ್ದ ಬೆಂಗಳೂರಿನ ಪ್ರತಿಷ್ಠಿತ GT Mallಗೆ ತೆರಿಗೆ ಪಾವಕಿ ಬಾಕಿ ಹಿನ್ನಲೆಯಲ್ಲಿ ಬೀಗ ಜಡಿಯಲಾಗಿದೆ.
ಪಂಚೆ ಧರಿಸಿದ್ದಾರೆ ಬಂದಿದ್ದಾರೆ ಎನ್ನುವ ಕಾರಣಕ್ಕೇ ನಿನ್ನೆ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ನ (GT Mall) ಒಳಗೆ ಹಾವೇರಿ ಮೂಲದ ರೈತನನ್ನು ಬಿಟ್ಟಿರಲಿಲ್ಲ. ಇದು ವ್ಯಾಪಕ ಚರ್ಚೆಗೂ ಕಾರಣವಾಗಿತ್ತು. ಅಷ್ಟೇ ಅಲ್ಲದೆ ಇಂದು ಸದನದಲ್ಲಿ ಕೂಡ ಚರ್ಚೆಯಾಗಿದೆ.
ಜಿಟಿ ಮಾಲ್ ಅನ್ನು ಬಂದ್ ಮಾಡುವಂತೆ ಒತ್ತಾಯಿಸಲಾಗಿತ್ತು. ಇದೀಗ ಮಾಲ್ ಗೆ ಅಧಿಕಾರಿಗಳು ಬಿಗ ಜಡಿದಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದಕ್ಷಿಣ ವಲಯ ವಿಭಾಗವು 1.78 ಕೋಟಿ ರೂ. ತೆರಿಗೆ ಬಾಕಿ ಹಿನ್ನಲೆಯಲ್ಲಿ ಮಾಲ್ ಅನ್ನು ಸೀಲ್ ಮಾಡಿದೆ.
2023-2024ರ ಆಸ್ತಿ ತೆರಿಗೆಯನ್ನು ಪಾವತಿಸಲು ಮಾಲ್ ಅಧಿಕಾರಿಗಳು ವಿಫಲರಾಗಿದ್ದು, ಆದ್ದರಿಂದ ನಾವು ಸೀಲಿಂಗ್‌ನಂತಹ ಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಬಿಬಿಎಂಪಿ ದಕ್ಷಿಣ ವಲಯ ಆಯುಕ್ತ ವಿನೋತ್ ಪ್ರಿಯಾ ಹೇಳಿದ್ದಾರೆ. ಈ ಹಿಂದೆ ಸಾಕಷ್ಟು ಬಾರಿ ಮಾಲ್ ಅಧಿಕಾರಿಗಳಿಗೆ ತೆರಿಗೆ ಬಾಕಿ ಪಾವತಿಗೆ ಜ್ಞಾಪನೆ ನೋಟಿಸ್‌ಗಳನ್ನು ಸಹ ನೀಡಲಾಗಿತ್ತು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೂಡ ಮಾಲ್ ಅನ್ನು ಸೀಲ್ ಡೌನ್ ಮಾಡಲು ಸೂಚನೆ ನೀಡಿದ್ದಾರೆ. ಅದರಂತೆ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.