ಇತ್ತೀಚೆಗೆ ಎಚ್ಡಿಎಫ್ಸಿ, ಐಸಿಐಸಿಐ, ಎಸ್ಬಿಐ ಸೇರಿದಂತೆ ಕೆಲ ಬ್ಯಾಂಕುಗಳು ತಮ್ಮ ವಿವಿಧ ಸರ್ವಿಸ್ ಚಾರ್ಜ್ಗಳನ್ನು ಪರಿಷ್ಕರಿಸಿವೆ. ಎನ್ಇಎಫ್ಟಿ, ಐಎಂಪಿಎಸ್ ಇತ್ಯಾದಿ ಪೇಮೆಂಟ್ ಸರ್ವಿಸ್ಗಳಿಗೆ ಶುಲ್ಕವನ್ನು (Service charge) ಹೆಚ್ಚಿಸಿವೆ. ಅಷ್ಟಕ್ಕೂ ಯಾವ್ಯಾವ ವಿಧದ ಪೇಮೆಂಟ್ ಸಿಸ್ಟಂಗಳಿವೆ, ಇವುಗಳಿಗೆ ಎಷ್ಟು ಶುಲ್ಕ, ಟ್ರಾನ್ಸ್ಫರ್ ಮಿತಿ ಇದೆ ಎಂಬ ಮಾಹಿತಿ ಈ ಲೇಖನದಲ್ಲಿದೆ.
ಬ್ಯಾಂಕ್ನಲ್ಲಿ ವಿವಿಧ ಪೇಮೆಂಟ್ ವಿಧಗಳು
- ಎನ್ಇಎಫ್ಟಿ
- ಐಎಂಪಿಎಸ್
- ಆರ್ಟಿಜಿಎಸ್
- ಇಸಿಎಸ್/ಎಸಿಎಚ್
ನೆಟ್ಬ್ಯಾಂಕಿಂಗ್ನಲ್ಲಿ ನೀವು ಹಣ ಕಳುಹಿಸುವುದಾದರೆ ಹೆಚ್ಚಾಗಿ ಎನ್ಇಎಫ್ಟಿ ಮತ್ತು ಐಎಂಪಿಎಸ್ ಅನ್ನು ಬಳಸುತ್ತೀರಿ. ಎರಡಕ್ಕೂ ವ್ಯತ್ಯಾಸ ಇದೆ. ಎನ್ಇಎಫ್ಟಿ ಎಂದರೆ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ಫರ್. ಬ್ಯಾಚ್ಗಳಲ್ಲಿ ಇವುಗಳ ಪೇಮೆಂಟ್ ಅನ್ನು ಸೆಟಲ್ಮೆಂಟ್ ಮಾಡಲಾಗುತ್ತದೆ.
ಎನ್ಇಎಫ್ಟಿಯಲ್ಲಿ ನೀವು ಟ್ರಾನ್ಸಾಕ್ಷನ್ ಮಾಡಿದಾಗ, ಅದನ್ನು ಬೇರೆಯವರ ಕೆಲ ಟ್ರಾನ್ಸಾಕ್ಷನ್ಗಳ ಜೊತೆ ಒಂದು ಬ್ಯಾಚ್ಗೆ ಸೇರಿಸಲಾಗುತ್ತದೆ. ಒಂದು ಬ್ಯಾಚ್ ನಂತರ ಮತ್ತೊಂದು ಬ್ಯಾಚ್ ಹೀಗೆ ಗುಂಪಾಗಿ ಪೇಮೆಂಟ್ ಸೆಟಲ್ಮೆಂಟ್ ಮಾಡಲಾಗುತ್ತದೆ. ಹೀಗಾಗಿ, ತತ್ಕ್ಷಣಕ್ಕೆ ಪೇಮೆಂಟ್ ಆಗೋದಿಲ್ಲ. ಹಣ ಕ್ರೆಡಿಟ್ ಆಗಲು 30 ನಿಮಿಷದಿಂದ ಹಿಡಿದು ಒಂದು ಗಂಟೆಯವರೆಗೆ ಕಾಯಬೇಕಾಗಬಹುದು.
ನೀವು ಆನ್ಲೈನ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹಾಗೂ ಬ್ಯಾಂಕ್ ಶಾಖೆಯಲ್ಲಿ ಎನ್ಇಎಫ್ಟಿ ಮಾಡಬಹುದು. ಆನ್ಲೈನ್ನಲ್ಲಿ ಎನ್ಇಎಫ್ಟಿ ಮೂಲಕ ಹಣ ಕಳುಹಿಸಲು ಶುಲ್ಕ ಇರುವುದಿಲ್ಲ. ಬ್ಯಾಂಕ್ ಶಾಖೆಗಳಲ್ಲಿ ಶುಲ್ಕ ಇರುತ್ತದೆ. ಸಾಮಾನ್ಯವಾಗಿ ಎರಡು ರೂನಿಂದ ಹಿಡಿದು 25 ರೂವರೆಗೆ ಶುಲ್ಕಗಳನ್ನು ವಿಧಿಸಲಾಗುತ್ತದೆ.
ಕೂಡಲೇ ಹಣ ಕಳುಹಿಸಲು ಐಎಂಪಿಎಸ್
ಐಎಂಪಿಎಸ್ ಎಂದರೆ ಇಮ್ಮೀಡಿಯೇಟ್ ಪೇಮೆಂಟ್ ಸರ್ವಿಸ್. ಎನ್ಪಿಸಿಐನಿಂದ ಅಭಿವೃದ್ಧಿಗೊಂಡ ಪೇಮೆಂಟ್ ಸಿಸ್ಟಂ. ತತ್ಕ್ಷಣಕ್ಕೆ ಹಣ ಕ್ರೆಡಿಟ್ ಆಗುತ್ತದೆ. ಯುಪಿಐ ಅನ್ನು ಇದೇ ಪ್ಲಾಟ್ಫಾರ್ಮ್ ಅಡಿ ಅಭಿವೃದ್ಧಪಡಿಸಲಾಗಿದೆ.
ಐಎಂಪಿಎಸ್ನಲ್ಲಿ ನೀವು 5 ಲಕ್ಷ ರೂವರೆಗೆ ಮಾತ್ರ ಹಣ ಕಳುಹಿಸಲು ಪರಿಮಿತಿ ಇದೆ. ಆನ್ಲೈನ್ನಲ್ಲಿ ಮಾತ್ರವೇ ಇದರ ಪಾವತಿ ಇರುತ್ತದೆ. ಬ್ಯಾಂಕ್ ಶಾಖೆಯಲ್ಲಿ ಎನ್ಇಎಫ್ಟಿ, ಆರ್ಟಿಜಿಎಸ್ ಪೇಮೆಂಟ್ ವಿಧಾನಗಳಿರುತ್ತವೆ.
ಐಎಂಪಿಎಸ್ ಮೂಲಕ ಹಣ ಪಾವತಿಸಲು ಶುಲ್ಕ ಎರಡು ರೂನಿಂದ ಹಿಡಿದು 15 ರೂವರೆಗೆ ಇರುತ್ತದೆ.
ಆರ್ಟಿಜಿಎಸ್ ಪೇಮೆಂಟ್ ಸಿಸ್ಟಂ
ಆರ್ಟಿಜಿಎಸ್ ಎಂದರೆ ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್. ಐಎಂಪಿಎಸ್ ರೀತಿಯಲ್ಲಿ ಇದೂ ಕೂಡ ರಿಯಲ್ ಟೈಮ್ನಲ್ಲಿ ಹಣ ಕ್ರೆಡಿಟ್ ಮಾಡುತ್ತದೆ. ಎನ್ಇಎಫ್ಟಿ ರೀತಿ ಬ್ಯಾಚ್ ಪ್ರೋಸಸಿಂಗ್ ಆಗಲು ಕಾಯಬೇಕಿಲ್ಲ. ಆದರೆ, 2 ಲಕ್ಷ ರೂಗಿಂತ ಹೆಚ್ಚು ಮೊತ್ತದ ಹಣ ಕಳುಹಿಸಬೇಕಾದರೆ ಮಾತ್ರ ಆರ್ಟಿಜಿಎಸ್ ಬಳಸಲು ಸಾಧ್ಯ. ಇದಕ್ಕೆ ಶುಲ್ಕ 15 ರೂನಿಂದ 45 ರೂ ಇದೆ.
ಬ್ಯಾಂಕ್ ಗ್ರಾಹಕರು ಯಾವ ಪೇಮೆಂಟ್ ವಿಧಾನ ಬಳಸಬಹುದು?
ಸದ್ಯ ಯುಪಿಐನಲ್ಲಿ ಹಣ ಪಾವತಿಸಲು ಶುಲ್ಕ ಇಲ್ಲ. ಆದರೆ, ದಿನದ ಮಿತಿ ಇದೆ. ಒಂದು ಲಕ್ಷ ರೂ ಮೇಲ್ಪಟ್ಟು, ಮತ್ತು ಐದು ಲಕ್ಷ ರೂ ಒಳಗಿರುವ ಮೊತ್ತವನ್ನು ಪಾವತಿಸಬೇಕೆಂದರೆ ಆನ್ಲೈನ್ನಲ್ಲಿ ಐಎಂಪಿಎಸ್ ಬಳಸಬಹುದು. ತತ್ಕ್ಷಣಕ್ಕೆ ಹಣ ಕ್ರೆಡಿಟ್ ಆಗುವ ಅವಶ್ಯಕತೆ ಇಲ್ಲ ಎನ್ನುವ ಸಂದರ್ಭ ಇದ್ದರೆ ಎನ್ಇಎಫ್ಟಿ ಮಾಡಬಹುದು.
ಆದರೆ, 5 ಲಕ್ಷ ರೂಗೂ ಹೆಚ್ಚಿನ ಮೊತ್ತ ಇದ್ದು, ಅದು ತತ್ಕ್ಷಣವೇ ಅಕೌಂಟ್ಗೆ ಕ್ರೆಡಿಟ್ ಆಗಬೇಕೆಂದರೆ ಆರ್ಟಿಜಿಎಸ್ ಮಾಡುವುದು ಉತ್ತಮ. ಇಲ್ಲದಿದ್ದರೆ ಆನ್ಲೈನ್ನಲ್ಲೇ ಎನ್ಇಎಫ್ಟಿ ಮಾಡಬಹುದು.
For More Updates Join our WhatsApp Group :
