ಸಂಭಾಲ್ ಹಿಂಸಾಚಾರ: ಲೋಕಸಭೆಯಲ್ಲಿ ಪ್ರತಿಪಕ್ಷಗಳ ಸಭಾತ್ಯಾಗ

ಸಂಭಾಲ್ ಹಿಂಸಾಚಾರ: ಲೋಕಸಭೆಯಲ್ಲಿ ಪ್ರತಿಪಕ್ಷಗಳ ಸಭಾತ್ಯಾಗ

ನವದೆಹಲಿ: ಉತ್ತರ ಪ್ರದೇಶದ ಸಂಭಾಲ್ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಕುರಿತು ಲೋಕಸಭೆಯಲ್ಲಿ ಚರ್ಚೆಗೆ ಬಿಗಿ ಪಟ್ಟು ಹಿಡಿದು ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಬಹುತೇಕ ಎಲ್ಲಾ ಪ್ರತಿಪಕ್ಷಗಳು ಮಂಗಳವಾರ ಸದನದಿಂದ ಸ್ವಲ್ಪಕಾಲ ಸಭಾತ್ಯಾಗ ನಡೆಸಿದವು.

ಪ್ರಶ್ನೋತ್ತರ ಅವಧಿ ಆರಂಭವಾಗುತ್ತಿದ್ದಂತೆಯೇ, ತನ್ನ ಆಸನದಿಂದ ಮೇಲೆದ್ದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ವಿಷಯ ಪ್ರಸ್ತಾಪಿಸಿ, ಸಂಭಾಲ್ ವಿಚಾರ ಕುರಿತು ಮಾತನಾಡಲು ಸ್ಪೀಕರ್ ಓಂ ಬಿರ್ಲಾ ಅವರ ಅನುಮತಿ ಕೋರಿದರು. ಇದು ತುಂಬಾ ಗಂಭೀರವಾದ ವಿಷಯ. ಐದು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಶೂನ್ಯ ವೇಳೆಯಲ್ಲಿ ಮಾತನಾಡಲು ಅವಕಾಶ ಕೊಡುವುದಾಗಿ ಹೇಳಿದರು. ಇದರಿಂದ ಕೆರಳಿದ ಯಾದವ್ ಹಾಗೂ ಅವರ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು. ಈ ಮಧ್ಯೆ ಕೆಲ ಎಸ್ ಪಿ ಸದಸ್ಯರು ಸದನದ ಬಾವಿಗಿಳಿದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಮಧ್ಯೆ ಡಿಎಂಕೆ ಸದಸ್ಯ ಎ ರಾಜಾ, ಕಾಂಗ್ರೆಸ್ ಸೇರಿದಂತೆ ಇತರ ಪ್ರತಿಪಕ್ಷದ ಸದಸ್ಯರು ಎಸ್ಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದರು.

ಎನ್ಸಿಪಿ ಮತ್ತು ಶಿವಸೇನೆ-ಯುಬಿಟಿ ಸದಸ್ಯರು ಸಮಾಜವಾದಿ ಪಕ್ಷದ ಸಂಸದರ ಬೆಂಬಲಕ್ಕೆ ಎದ್ದು ನಿಂತರು. ಕೆಲ ಕಾಂಗ್ರೆಸ್ ಸದಸ್ಯರು ಕೂಡ ಎದ್ದು ನಿಂತು, ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.ಪ್ರತಿಭಟನೆ ನಡೆಯುತ್ತಿರುವಾಗಲೇ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಯಾದವ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಸ್ವಲ್ಪ ಸಮಯದ ನಂತರ, ಯಾದವ್ ತಮ್ಮ ಪಕ್ಷದ ಸಂಸದರನ್ನು ಹೊರಹೊಗುವಂತೆ ಸನ್ನೆ ಮಾಡಿದರು. ಗಾಂಧಿ ಸೇರಿದಂತೆ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು.

Leave a Reply

Your email address will not be published. Required fields are marked *