ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಹೀಗೆ ಹಲವು ಬಿರುದಾವಳಿ ಹೊಂದಿರುವ ನಟ ಡಾ.ಶಿವರಾಜ್ಕುಮಾರ್. ಕನ್ನಡ ಚಿತ್ರರಂಗದ ನಿರ್ಮಾಪಕರ ಅಚ್ಚುಮೆಚ್ಚಿನ ಶಿವಣ್ಣನಿಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. ನಾಳೆ, (ಜುಲೈ 12) 62ನೇ ವಸಂತಕ್ಕೆ ಕಾಲಿಡುತ್ತಿರುವ ನಟನ ಬರ್ತ್ಡೇಗೆ ‘ಭೈರತಿ ರಣಗಲ್’ ಹಾಗೂ ’45’ ಸಿನಿಮಾ ತಂಡಗಳಿಂದ ಸ್ಪೆಷಲ್ ಗಿಫ್ಟ್ ಸಿದ್ಧವಾಗಿದೆ.
ಈಗಾಗಲೇ ‘ಭೈರತಿ ರಣಗಲ್’ ಚಿತ್ರತಂಡ ಸ್ಪೆಷಲ್ ಟೀಸರ್ ರಿಲೀಸ್ ಮಾಡಲು ಯೋಜಿಸಿದೆ. ಈ ಮಧ್ಯೆ ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಹಾಗೂ ನಿರ್ಮಾಪಕ ಎಂ.ರಮೇಶ್ ರೆಡ್ಡಿ ನಿರ್ಮಾಣದ ’45’ ಸಿನಿಮಾದಲ್ಲಿ ಶಿವಣ್ಣನ ಖದರ್ ಹೇಗಿರಲಿದೆ ಎಂಬುದರ ಬಗ್ಗೆ ಫಸ್ಟ್ ಲುಕ್ ರಿಲೀಸ್ ಮಾಡಲು ಸಿದ್ಧತೆಯೂ ನಡೆದಿದೆ.
ತಮ್ಮ ಹುಟ್ಟುಹಬ್ಬದ ಕುರಿತು ಶಿವ ರಾಜ್ಕುಮಾರ್ ಪ್ರತಿಕ್ರಿಯಿಸಿ, ಹುಟ್ಟುಹಬ್ಬ ಅನ್ನೋದೇ ಗಿಫ್ಟ್. ಅದು ತಂದೆ-ತಾಯಿಯಿಂದ ಪಡೆಯುವಂಥದ್ದು. ಅಂಥ ಪೋಷಕರನ್ನು ಪಡೆದಿದ್ದೇ ನನಗೆ ದೊಡ್ಡ ಗಿಫ್ಟ್. ಪ್ರತೀ ವರ್ಷ ಅಭಿಮಾನಿಗಳು ತಮ್ಮ ಹಣದಲ್ಲಿ ಕೇಕ್ ತಂದು ಕಟ್ ಮಾಡಿಸಿ ಸಂತೋಷ ಪಡುತ್ತೀರಿ. ಅಭಿಮಾನಿ ದೇವರುಗಳಿಗೆ ಈ ಬಾರಿ ನನ್ನ ಹುಟ್ಟುಹಬ್ಬಕ್ಕೆ ’45’ ಚಿತ್ರದ ಫಸ್ಟ್ ಲುಕ್ ಅನ್ನು ಉಡುಗೊರೆಯಾಗಿ ಕೊಡುತ್ತೇನೆ.
ಇದು ನನ್ನ ಅತ್ಯಂತ ಮೆಚ್ಚಿನ ಚಿತ್ರ. ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಚಿತ್ರವೂ ಹೌದು. ಸಿನಿಮಾ ಮಾಡುವ ಸಂದರ್ಭವೇ ಬಹಳ ಖುಷಿ ಇತ್ತು. ಏಕೆಂದರೆ, ಉಪೇಂದ್ರ ಮತ್ತು ರಾಜ್ ಬಿ.ಶೆಟ್ಟಿ ಅವರೂ ಇದ್ದಾರೆ. ಇದೊಂದು ಅದ್ಭುತ ಕಾಂಬಿನೇಶನ್. ಭಾರತೀಯ ಚಿತ್ರರಂಗದಲ್ಲೇ ಅದ್ಭುತ ಸಿನಿಮಾ ಆಗಲಿದೆ ಎಂಬ ನಂಬಿಕೆಯಿದೆ. ಮಿಕ್ಕಿದ್ದು ದೇವರಿಗೆ ಬಿಟ್ಟಿದ್ದು. ಅಭಿಮಾನಿಗಳೇ ದೇವರು ಎಂದು ಅಪ್ಪಾಜಿ ಹೇಳಿದ್ರಲ್ವೇ?. ಜುಲೈ 12ರಂದು 45ರ ಫಸ್ಟ್ ಲುಕ್ ನೋಡಿ ಎಂದು ಹೇಳಿದ್ದಾರೆ. ವಿಡಿಯೋ ಕೊನೆಗೆ ಶಿವ ರಾಜ್ಕುಮಾರ್ ಅವರಿಂದ 45ರ ಪ್ರೇಮದ ಕಾಣಿಕೆ ಎಂದು ಬರೆಯಲಾಗಿದೆ.