ಡಿನ್ನರ್ ಮೀಟಿಂಗ್ ಬಳಿಕ ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ಬಣ ಬಡಿದಾಟ ಆರಂಭ.
ಬೆಳಗಾವಿ : ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ವಿವಾದ ಹೈಕಮಾಂಡ್ ಅಂಗಳ ತಲುಪಿದ ಬೆನ್ನಲ್ಲೇ ರಾಜ್ಯದಲ್ಲಿ ನಡೆಯುತ್ತಿದ್ದ ರಾಜಕೀಯ ವಾಗ್ಯುದ್ಧಕ್ಕೆ ಕೊಂಚ ಬ್ರೇಕ್ ಬಿದ್ದಿತ್ತು. ಆದರೆ ಬೆಳಗಾವಿ ಅಧಿವೇಶನದ ಹೊತ್ತಲ್ಲೇ ಡಿಸಿಎಂ ಡಿಕೆಶಿ ಆಯೋಜಿಸಿದ್ದ ಡಿನ್ನರ್ ಮೀಟಿಂಗ್ ಬಳಿಕ ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ಬಣ ಬಡಿದಾಟ ಆರಂಭವಾಗಿದೆ. ಡಿಕೆಶಿಗೆ ಕೌಂಟರ್ ಎಂಬಂತೆ ಸಿಎಂ ಸಿದ್ದರಾಮಯ್ಯ ಆಪ್ತ ಬಣದ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಏರ್ಪಡಿಸಿದ್ದ ಡಿನ್ನರ್ ಮೀಟಿಂಗೇ ಇದಕ್ಕೆ ಸಾಕ್ಷಿ.
ಬೆಳಗಾವಿ ಅಧಿವೇಶನ ಸಂದರ್ಭದಲ್ಲೇ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಮತ್ತೊಂದು ಡಿನ್ನರ್ ಸಭೆ ನಡೆದಿದೆ. ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಊಟದ ನೆಪದಲ್ಲಿ ಸಿಎಂ ಸಿದ್ದರಾಮಯ್ಯ ಬಣದ ಬಹುತೇಕ ಶಾಸಕರು ಒಟ್ಟಿಗೆ ಸೇರಿದ್ದಾರೆ. ಸುಮಾರು 36 ಮಂದಿ ಶಾಸಕರು ಡಿನ್ನರ್ ಮೀಟಿಂಗ್ನಲ್ಲಿ ಭಾಗಿಯಾಗಿದ್ದು, ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಕೂಡ ಇದರಲ್ಲಿ ಭಾಗಿಯಾಗಿರೋದು ವಿಶೇಷವಾಗಿತ್ತು. ನಮ್ಮ ಜೊತೆ ಶಾಸಕರ ಬಲ ಇದೆ ಎಂದು ತೋರಿಸಲು ಡಿನ್ನರ್ ಆಯೋಜಿಸಿದ್ದ ಡಿ.ಕೆ. ಶಿವಕುಮಾರ್ಗೆ ಕೌಂಟರ್ ಎನ್ನುವಂತೆ ಸತೀಶ್ ಜಾರಕಿಹೊಳಿ ನೆತೃತ್ವದಲ್ಲಿ ಮತ್ತೊಂದು ಬಣ ಒಟ್ಟಾಗಿರೋದು ಬೇರೆಯದ್ದೇ ಸಂದೇಶ ರವಾನಿಸಿದೆ. ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ಕಾಂಗ್ರೆಸ್ ವರಿಷ್ಠರು ಕೂಡ ಚರ್ಚೆ ನಡೆಸುತ್ತಿದ್ದು, ಸಾಧಕ ಮತ್ತು ಬಾಧಕಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಈ ಹೊತ್ತಲ್ಲಿ ರಾಜ್ಯ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು, ಹೈಕಮಾಂಡ್ಗೆ ಸಂದೇಶ ರವಾನಿಸುವ ನಾಯಕರ ಯತ್ನ ಎಂಬ ಮಾತುಗಳೂ ಕೇಳಿಬಂದಿವೆ.
For More Updates Join our WhatsApp Group :




