ಬೆಳಗಾವಿ: ಜಿಲ್ಲೆಯಲ್ಲಿ ಸಪ್ತ ನದಿಗಳ ಪ್ರವಾಹ ಹಾಗೂ ಧಾರಾಕಾರ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಇಂದು ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ, ಸಂತ್ರಸ್ತರಿಗೆ ಧೈರ್ಯ ತುಂಬಲಿದ್ದಾರೆ. ವಿಶೇಷ ವಿಮಾನದಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಮುಖ್ಯಮಂತ್ರಿ, 12.15ರ ಸುಮಾರಿಗೆ ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿ ನಲುಗಿರುವ ಗೋಕಾಕ್ ಮತ್ತು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿ ಅವಲೋಕಿಸಲಿದ್ದಾರೆ.
ಇದಾದ ಬಳಿಕ, ಮಧ್ಯಾಹ್ನದ ಕೃಷ್ಣಾ ನದಿ ಪ್ರವಾಹಕ್ಕೆ ಒಳಗಾದ ಕಾಗವಾಡ ತಾಲೂಕಿನ ಜೂಗಳ ಗ್ರಾಮಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ನಂತರ ಚಿಕ್ಕೋಡಿ ತಾಲೂಕಿನ ಮಾಂಜರಿ ಸೇತುವೆ ವೀಕ್ಷಣೆ ಮಾಡಲಿದ್ದಾರೆ. ರಾತ್ರಿ 8 ಗಂಟೆ ವಿಮಾನದ ಮೂಲಕ ಬೆಂಗಳೂರಿಗೆ ವಾಪಸ್ ತೆರಳಲಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ವೇಳೆ ಮುಖ್ಯಮಂತ್ರಿಗೆ ಜಿಲ್ಲೆಯ ಸಚಿವರು, ಶಾಸಕರು, ಅಧಿಕಾರಿಗಳು ಸಾಥ್ ಕೊಡಲಿದ್ದಾರೆ.
ಹಿಂದೆ ಬೆಳಗಾವಿ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಅಪಾರ ಜನ ಮೆಚ್ಚುಗೆ ಗಳಿಸಿದ್ದ ಡಾ.ಶಾಲಿನಿ ರಜನೀಶ್ ಅವರು ಸದ್ಯ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್ ಅವರು ಕೂಡ ಮೊದಲ ಬಾರಿಗೆ ಮುಖ್ಯಮಂತ್ರಿಗಳೊಂದಿಗೆ ಇಂದು ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಅಲ್ಲದೇ, ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿರುವ ಸಿಎಂ ಜೊತೆ ಅವರೂ ಅತಿವೃಷ್ಠಿಯಿಂದಾದ ಹಾನಿಯನ್ನು ಪರಿಶೀಲನೆ ನಡೆಸಲಿದ್ದಾರೆ.