ಹುಬ್ಬಳ್ಳಿ: “ಉತ್ತರ ಕರ್ನಾಟಕದ ಜನರಿಗೆ ಕಿಮ್ಸ್ ಆಸ್ಪತ್ರೆ ಉತ್ತಮ ಆರೋಗ್ಯ ಸೇವೆ ನೀಡುತ್ತಿದೆ. ಪ್ರತಿದಿನ ಇಲ್ಲಿ 1,626 ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸರಾಸರಿ 201ರಷ್ಟು ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರದಿಂದ ಗುರುವಾರದವರೆಗೆ ರೋಗಿಗಳ ಸಂಖ್ಯೆ ಹೆಚ್ಚಿರುತ್ತದೆ. ಶುಕ್ರವಾರದಿಂದ ಭಾನುವಾರದವರೆಗೆ ಈ ಪ್ರಮಾಣ ಕಡಿಮೆ. ಕಳೆದ ಎರಡು ವರ್ಷಗಳಲ್ಲಿ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, ಎಂಆರ್‌ಐ ಸ್ಕ್ಯಾನಿಂಗ್‌ಗೆ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ” ಎಂದು ಕಿಮ್ಸ್ ನಿರ್ದೇಶಕ ಡಾ.ಎಸ್.ಎಫ್.ಕಮ್ಮಾರ ಹೇಳಿದ್ದಾರೆ.
ಸದ್ಯದಲ್ಲೇ ಬ್ರೇಕಿಥೆರಪಿ ಆರಂಭ: ”ಆಸ್ಪತ್ರೆಯಲ್ಲಿ ಜೀವಾಮೃತ ತಾಯಿ ಹಾಲು ಭಂಡಾರ ಕೇಂದ್ರವನ್ನೂ ಸಹ ತೆರೆಯಲಾಗಿದೆ. ನಗದುರಹಿತ ಚಿಕಿತ್ಸೆಗೆ ರೈಲ್ವೆ ಇಲಾಖೆ, ಪೊಲೀಸ್ ಇಲಾಖೆ, ಹೆಸ್ಕಾಂ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಕೊಳ್ಳಲಾಗಿದೆ. ಬಂಕಾಪುರದಿಂದ ತೇಗೂರುವರೆಗೆ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ 48 ಗಂಟೆಯೊಳಗೆ ನಗದುರಹಿತ ಚಿಕಿತ್ಸೆ ನೀಡಲಾಗುತ್ತಿದೆ. ಬ್ರೇಕಿಥೆರಪಿಯನ್ನೂ ಸದ್ಯದಲ್ಲೇ ಆರಂಭಿಸಲಾಗುವುದು. ಇದರಿಂದ ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗಲಿದೆ. ಟೆಲಿ ಐಸಿಯು ಹಬ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹೊಸದಾಗಿ ನವಜಾತ ಶಿಶು ವಿಭಾಗ (ನಿಯೋ ನ್ಯಾಟೋಲಜಿ) ತೆರೆಯಲಾಗುವುದು. ವಿದ್ಯಾರ್ಥಿಗಳ ವಸತಿ ನಿಲಯಗಳ ನವೀಕರಣ, ಕ್ರೀಡಾಂಗಣ ಅಭಿವೃದ್ಧಿ, 8 ಓಟಿಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಅಗ್ನಿ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. 60 ಹಾಸಿಗೆಗಳ ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೇ, ವಿವಿಧ ಕಾಮಗಾರಿಗಳ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಬರುವ ಅಕ್ಟೋಬರ್ ತಿಂಗಳಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಹಮ್ಮಿಕೊಳ್ಳಲಾಗುವುದು” ಎಂದು ಅವರು ವಿವರಿಸಿದರು.
ಕಿಮ್ಸ್ ಪ್ರಾಚಾರ್ಯ ಡಾ.ಈಶ್ವರ ಹೊಸಮನಿ ಮಾತನಾಡಿ, “ಜೀವ ಸಾಧಕ ಸಂಘದಲ್ಲಿ ಮೊದಲೇ ಅಂಗಾಂಗ ದಾನಗಳನ್ನು ಯಾವ ಆಸ್ಪತ್ರೆಗೆ ನೀಡಲಾಗುತ್ತದೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿರುವುದಿಲ್ಲ. ಕಿಮ್ಸ್‌ನಲ್ಲಿ ಕಣ್ಣು ಮತ್ತು ಕಿಡ್ನಿ ಕಸಿ ಮಾಡಲು ಅವಕಾಶವಿದೆ. ಯಕೃತ್ತು ಕಸಿ ಮಾಡಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.