ಖ್ಯಾತ ಹಿನ್ನೆಲೆ ಗಾಯಕ ಉದಿತ್ ನಾರಾಯಣ್ ಅವರ ಮ್ಯೂಸಿಕ್ ಪ್ರೋಗ್ರಾಮ್ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿರೋ ವಿಡಿಯೋದಲ್ಲಿ, ಗಾಯಕ ತಮ್ಮ ಸೂಪರ್ ಹಿಟ್ ಹಾಡುಗಳಲ್ಲಿ ಒಂದಾದ ಮೊಹ್ರಾ ಸಿನಿಮಾದ ‘ಟಿಪ್ ಟಿಪ್ ಬರ್ಸಾ ಪಾನಿ’ ಹಾಡನ್ನು ಹಾಡುತ್ತಿರೋದನ್ನು ಕಾಣಬಹುದು. ಆದ್ರೆ ವೇದಿಕೆ ಬಳಿಯಿದ್ದ ಅಭಿಮಾನಿಗಳು ಸೆಲ್ಫಿಗಾಗಿ ವಿನಂತಿಸಿದಾಗ ಪರಿಸ್ಥಿತಿ ಆಘಾತಕಾರಿ ಟ್ವಿಸ್ಟ್ ಪಡೆದುಕೊಂಡಿತು. ಕೆಲ ಮಹಿಳಾ ಅಭಿಮಾನಿಗಳಿಗೆ ಗಾಯಕ ಚುಂಬಿಸಿರುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡಿದೆ.
ಉದಿತ್ ನಾರಾಯಣ್ ಅವರು ಸಂಗೀತ ಪ್ರದರ್ಶನ ನೀಡುತ್ತಿದ್ದ ಸಂದರ್ಭ ಅಭಿಮಾನಿಗಳೊಂದಿಗೆ ನಡೆದುಕೊಂಡ ರೀತಿಯನ್ನು ಈ ವೈರಲ್ ವಿಡಿಯೋದಲ್ಲಿ ಕಾಣಬಹುದು. ಟಿಪ್ ಟಿಪ್ ಬರ್ಸಾ ಪಾನಿ ಹಾಡುತ್ತಿದ್ದ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸಲುವಾಗಿ ಮಹಿಳಾ ಅಭಿಮಾನಿಗಳ ಗುಂಪು ವೇದಿಕೆ ಬಳಿ ನಿಂತಿತ್ತು. ಸ್ಟೇಜ್ ಕೆಳಗಿದ್ದವರು ಸೆಲ್ಫಿಗಾಗಿ ಗಾಯಕನಲ್ಲಿ ವಿನಂತಿಸಿದರು. ಶಾಕಿಂಗ್ ಎನ್ನುವಂತೆ, ಅಭಿಮಾನಿಯೋರ್ವರು ಗಾಯಕನ ಕೆನ್ನೆಗೆ ಮುತ್ತಿಟ್ಟರು. ಆ ಕೂಡಲೇ ಗಾಯಕ ಅವರ ತುಟಿಗೆ ಚುಂಬಿಸಿದರು. ಮತ್ತೊಬ್ಬ ಅಭಿಮಾನಿ ಬಳಿ ಭಾವೋದ್ರಿಕ್ತ ಮುತ್ತಿಗಾಗಿ ಮುಂದಕ್ಕೆ ಬಾಗಿ ನಿಂತಾಗ ಪರಿಸ್ಥಿತಿ ಮತ್ತಷ್ಟು ಅತಿರೇಕಕ್ಕೆ ತಿರುಗಿತು.
ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿಯೆಬ್ಬಿಸಿದೆ. ಕೆಲ ಅಭಿಮಾನಿಗಳು ಗಾಯಕನ ನಡೆಯನ್ನು ಸಮರ್ಥಿಸಿಕೊಂಡರೆ, ಅನೇಕರು ಅವರನ್ನು ಟೀಕಿಸಿದರು. ಅನುಚಿತ ಮತ್ತು ಅಗೌರವ ವರ್ತನೆ ಎಂದು ಹೆಚ್ಚಿನ ನೆಟ್ಟಿಗರು ಇದನ್ನು ಖಂಡಿಸಿದ್ದಾರೆ.
ಕೆಲ ಅಭಿಮಾನಿಗಳು ಉದಿತ್ ಅವರ ನಡೆಯನ್ನು ಸಮರ್ಥಿಸಿಕೊಂಡರು. ಕ್ಲೋಸ್ನೆಸ್ ಅನ್ನು ಆರಂಭಿಸಿದ್ದು ಮಹಿಳಾ ಅಭಿಮಾನಿಗಳು ಎಂದು ದೂಷಿಸಿದರು. ಇದೇ ಗಾಯಕನ ಅನಿರೀಕ್ಷಿತ ನಡೆಗೆ ಕಾರಣವಾಯ್ತು ಎಂಬುದು ಅಭಿಮಾನಿಗಳ ಅಭಿಪ್ರಾಯ. ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ಮುಂದುವರಿದಿದ್ದು, ಉದಿತ್ ನಾರಾಯಣ್ ಈವರೆಗೆ ವೈರಲ್ ವಿಡಿಯೋ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರ ತಂಡದಿಂದಲೂ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.