ಕೋರ್ಟ್ಗೆ ಆಡಿಯೋ ಸಲ್ಲಿಸುವ ಮುನ್ನವೇ ಅರೆಸ್ಟ್ ಮಾಡಿದ್ದೇಕೆ?
ಮೈಸೂರು: ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು, ಸತತ 17 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಮುಡಾ ಮಾಜಿ ಆಯುಕ್ತ ಡಿಬಿ ನಟೇಶ್, ತಮ್ಮ ವಿರುದ್ಧ ಸ್ನೇಹಮಯಿ ಕೃಷ್ಣ ನಕಲಿ ಆಡಿಯೋ ಸೃಷ್ಟಿಸಿ ಬಿಡುಗಡೆ ಮಾಡಿದ್ದಾರೆ ಎಂದು ಸಿಸಿಬಿಗೆ ನೀಡಿದ ದೂರಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಸ್ನೇಹಮಯಿ ಕೃಷ್ಣ ಅವರು ಕೋರ್ಟ್ಗೆ ಪ್ರಮುಖ ಆಡಿಯೋ ಮತ್ತು ದಾಖಲೆಗಳನ್ನು ಸಲ್ಲಿಸಲು ಸಿದ್ಧವಾಗಿದ್ದ ಸಮಯದಲ್ಲಿಯೇ ಬಂಧನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಏನಿದು ಪ್ರಕರಣ? ಸ್ನೇಹಮಯಿ ಬಂಧನವಾಗಿದ್ದೇಕೆ?
ಸ್ನೇಹಮಯಿ ಕೃಷ್ಣ ಮೂರು ಪ್ರಮುಖ ಆರೋಪಗಳನ್ನು ಮಾಡಿದ್ದರು. ಮೊದಲನೆಯದಾಗಿ, ಮುಡಾ ಮಾಜಿ ಆಯುಕ್ತ ನಟೇಶ್ ಬಡ್ತಿ ಪಡೆಯಲು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ 1.60 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂದು ಆರೋಪಿಸಿದ್ದರು. ಈ ಹಣವನ್ನು ಸಾಗಿಸಲಾಯಿತು ಎನ್ನಲಾದ ಕಾರಿನ ಭಾವಚಿತ್ರವನ್ನೂ ಅವರು ಬಿಡುಗಡೆ ಮಾಡಿದ್ದರು. ಎರಡನೆಯದಾಗಿ, ಡಿ.ಬಿ. ನಟೇಶ್ ಅವರು ವ್ಯಕ್ತಿಯೊಬ್ಬರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಸ್ನೇಹಮಯಿ ಕೃಷ್ಣ ಬಿಡುಗಡೆ ಮಾಡಿದ್ದರು. ಕೇವಲ ಆರು ಸೆಕೆಂಡ್ಗಳ ‘ಟ್ರೈಲರ್’ ಬಿಡುಗಡೆ ಮಾಡಿದ್ದೇನೆ ಎಂದಿದ್ದ ಅವರು, ಪೂರ್ಣ ಆಡಿಯೋವನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ತಿಳಿಸಿದ್ದರು. ಈ ಆಡಿಯೋದಲ್ಲಿ ನಟೇಶ್ ಅವರು ಹೇಗಾದರೂ ಮಾಡಿ ಸ್ನೇಹಮಯಿ ಕೃಷ್ಣ ಅವರನ್ನು ಸಂಪರ್ಕಕ್ಕೆ ತೆಗೆದುಕೊಳ್ಳುವಂತೆ ವ್ಯಕ್ತಿಯೊಬ್ಬರ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ.
ಮೂರನೆಯದಾಗಿ, ಲೋಕಾಯುಕ್ತದಲ್ಲಿ ಮುಡಾ ಪ್ರಕರಣದ ತನಿಖೆ ನಡೆಯುತ್ತಿದ್ದರೂ, ಹಿಂದಿನ ಆಯುಕ್ತ ದಿನೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರೂ, ನಟೇಶ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ನಟೇಶ್ ಲೋಕಾಯುಕ್ತರಿಗೂ ಲಂಚ ನೀಡಿದ್ದಾರೆ ಎಂದು ಆರೋಪಿಸಿ, ಕೈಬರಹದ ದಾಖಲೆಯೊಂದನ್ನು ಸ್ನೇಹಮಯಿ ಕೃಷ್ಣ ಬಿಡುಗಡೆ ಮಾಡಿದ್ದರು.
For More Updates Join our WhatsApp Group :




