ಹುಬ್ಬಳ್ಳಿ: ವಿಶ್ವವಿಖ್ಯಾತ ಪ್ರವಾಸಿ ತಾಣ ಜೋಗ ಜಲಪಾತದ ವೀಕ್ಷಣೆಗೆ ಪ್ರತಿ ಭಾನುವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಹುಬ್ಬಳ್ಳಿಯಿಂದ ವಿಶೇಷ ಸಾರಿಗೆ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಈ ಬಸ್ಗಳು ಗೋಕುಲ ರಸ್ತೆ ನಿಲ್ದಾಣದಿಂದ ಹೊರಡುತ್ತವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ತಿಳಿಸಿದ್ದಾರೆ.
ಇತ್ತೀಚೆಗೆ ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮೈದುಂಬಿರುವ ಜಲಪಾತಗಳು ಪ್ರವಾಸಿಗರನ್ನು ಸೆಳೆಯುತ್ತಿವೆ. ಜೋಗ ಜಲಪಾತವೂ ಜನರನ್ನು ಆಕರ್ಷಿಸುತ್ತಿದ್ದು, ಪ್ರಕೃತಿ ಸೌಂದರ್ಯ ಅನನ್ಯವಾಗಿದೆ. “ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಇರೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ” ಎನ್ನುವಂತೆ ಕಣ್ಮನ ಸೆಳೆಯುವ ಜಲಪಾತದ ದೃಶ್ಯ ವೈಭವ ಸವಿಯಲು ಇದು ಸಕಾಲ.
ರಾಜಹಂಸ ಬಸ್: ಹುಬ್ಬಳ್ಳಿಯಿಂದ ಬೆಳಗ್ಗೆ 7-30 ಗಂಟೆಗೆ ಹೊರಡುತ್ತದೆ. 11-45ಕ್ಕೆ ಜೋಗ ಜಲಪಾತ ತಲುತ್ತದೆ. ಬಳಿಕ ಅಲ್ಲಿಂದ ಸಂಜೆ 5-00 ಗಂಟೆಗೆ ಹೊರಟು, ರಾತ್ರಿ 9-30ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ. ಪ್ರಯಾಣ ದರ 430 ರೂ. ನಿಗದಿಪಡಿಸಲಾಗಿದೆ.
ವೋಲ್ವೊ ಎಸಿ ಬಸ್: ಈ ಬಸ್ ಹುಬ್ಬಳ್ಳಿಯಿಂದ ಬೆಳಗ್ಗೆ 8-00 ಗಂಟೆಗೆ ಹೊರಟು, 12-00 ಗಂಟೆಗೆ ಜೋಗ ಜಲಪಾತ ತಲುಪಲಿದೆ. ಅಲ್ಲಿಂದ ಸಂಜೆ 5-00ಕ್ಕೆ ಹೊರಡುವ ಬಸ್, ಹುಬ್ಬಳ್ಳಿಗೆ ರಾತ್ರಿ 9-00ಕ್ಕೆ ಮರಳಲಿದೆ. ಪ್ರಯಾಣ ದರ 600 ರೂ. ನಿಗದಿ ಮಾಡಲಾಗಿದೆ.
ಮುಂಗಡ ಬುಕ್ಕಿಂಗ್: ಈ ವಿಶೇಷ ಬಸ್ಗಳಿಗೆ www.ksrtc.in ಮತ್ತು KSRTC Mobile App ಮೂಲಕ ಆನ್ಲೈನ್ನಲ್ಲಿ ಹಾಗೂ ಗೋಕುಲ ರಸ್ತೆ ಬಸ್ ನಿಲ್ದಾಣ ಮತ್ತು ಹೊಸೂರು ಬಸ್ ನಿಲ್ದಾಣದಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.