ಕರ್ನಾಟಕ ಸರ್ಕಾರ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಪರೀಕ್ಷೆಯ ಉತ್ತೀರ್ಣ ನಿಯಮಗಳಲ್ಲಿ (Passing Rules) ಪ್ರಮುಖ ಬದಲಾವಣೆಯನ್ನು ಪ್ರಕಟಿಸಿದೆ. ಇಷ್ಟು ದಿನಗಳ ಕಾಲ ಪ್ರತಿಯೊಬ್ಬ ವಿದ್ಯಾರ್ಥಿ ಶೇ. 35 ಅಂಕ ಪಡೆದರೆ ಪಾಸ್ ಆಗುತ್ತಿದ್ದರು. ಆದರೆ ಈಗ ಪಾಸಿಂಗ್ ಮಾರ್ಕ್ಸ್ನಲ್ಲಿ (Passing Marks) ಬದಲಾವಣೆ ಮಾಡಲಾಗಿದೆ. ಇನ್ಮುಂದೆ ವಿದ್ಯಾರ್ಥಿ ಪಾಸ್ ಆಗಲು 35 ಅಂಕ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ, ಅದಕ್ಕೂ ಕಡಿಮೆ ಅಂಕ ಪಡೆದರು ಪಾಸ್ ಮಾಡಲಾಗುತ್ತದೆ.
ರಾಜ್ಯ ಸರ್ಕಾರ ಶಿಕ್ಷಣೆ ಇಲಾಖೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉತ್ತೀರ್ಣ ನಿಯಮದಲ್ಲಿ ಭಾರೀ ಬದಲಾವಣೆ ಮಾಡಿದ್ದಾರೆ. ವಿದ್ಯಾರ್ಥಿಗಳು ಪಾಸ್ ಆಗಲು ತೆಗೆದುಕೊಳ್ಳುತ್ತಿದ್ದ ಅಂಕವನ್ನು ಕಡಿಮೆ ಮಾಡಿ, ವಿದ್ಯಾರ್ಥಿಗಳು ಪಾಸ್ ಆಗಲು ಮತ್ತಷ್ಟು ಸುಲಭ ಮಾಡಿದ್ದಾರೆ.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಈವರೆಗೂ ಶೇ.35 ಅಂಕ ಪಡೆದರೆ ಪಾಸ್ ಆಗುತ್ತಿದ್ದರಯು. ಆದರೆ ಇನ್ಮುಂದೆ ವಿದ್ಯಾರ್ಥಿಗಳು ಒಟ್ಟಾರೆ ಶೇ.35 ರ ಬದಲಿಗೆ ಶೇ.33 ಅಂಕಗಳನ್ನು ಗಳಿಸಿದರೆ ಉತ್ತೀರ್ಣರಾಗಲಿದ್ದಾರೆ. ಈ ಕುರಿತು ರಾಜ್ಯ ಸರ್ಕಾರವು ಕರಡು ಅಧಿಸೂಚನೆಯನ್ನು ರಾಜ್ಯ ಪತ್ರದಲ್ಲಿ ಜುಲೈ 25, 2025 ರಂದು ಹೊರಡಿಸಿದ್ದು, ಈ ನಿಯಮದ ಮೇಲೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಉತ್ತೀರ್ಣಕ್ಕಾಗಿ ಈ 33 ಅಂಕಗಳ ನಿಮಯಕ್ಕೆ ಬರುವ ಆಕ್ಷೇಪಣೆಗಳನ್ನು ಪರಿಗಣಿಸಿದ ನಂತರ ಕರಡು ನಿಯಮವನ್ನು ಅಂತಿಮಗೊಳಿಸಲಾಗುವುದು.
ಶೇ. 35ರ ಬದಲಿಗೆ ಶೇ.33 ಗಳಿಸಿದರೆ ಪಾಸ್!
ಹೊಸ ನಿಯಮದ ಪ್ರಕಾರ, ಆಂತರಿಕ ಮೌಲ್ಯಮಾಪನ (ಒಟ್ಟು 125 ಅಂಕಗಳು) ಮತ್ತು ಬರವಣಿಗೆ ಪರೀಕ್ಷೆ (ಒಟ್ಟು 500 ಅಂಕಗಳು) ಸೇರಿ ಒಟ್ಟಾರೆ 625 ಅಂಕಗಳಿಗೆ ಕನಿಷ್ಠ 206 ಅಂಕಗಳನ್ನು (ಶೇ.33) ಗಳಿಸಿದ ವಿದ್ಯಾರ್ಥಿಗಳು ಉತ್ತೀರ್ಣರಾಗಲಿದ್ದಾರೆ. ಆದರೆ, ಪ್ರತಿ ವಿಷಯದ ಬಾಹ್ಯ ಬರವಣಿಗೆ ಪರೀಕ್ಷೆಯಲ್ಲಿ ಕನಿಷ್ಠ ಶೇ.30 ಅಂಕಗಳನ್ನು (80 ಕ್ಕೆ 24 ಅಂಕ) ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ಬದಲಾವಣೆಯು ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗುವ ಸಾಧ್ಯತೆಯನ್ನು ಸ್ವಲ್ಪ ಸುಲಭಗೊಳಿಸಿದರೂ, ಕನಿಷ್ಠ ವಿಷಯವಾರು ಅಂಕಗಳ ಅಗತ್ಯವು ಗುಣಮಟ್ಟವನ್ನು ಕಾಪಾಡಲು ಉದ್ದೇಶಿಸಿದೆ.
ಈಗಿನ ಶೇ.35 ರ ಉತ್ತೀರ್ಣ ನಿಯಮವನ್ನು ಶೇ.33 ಕ್ಕೆ ಇಳಿಸುವ ಈ ನಿರ್ಧಾರವು, ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಶಿಕ್ಷಣದಲ್ಲಿ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಸರ್ಕಾರದ ಪ್ರಯತ್ನವಾಗಿದೆ. ರಾಜ್ಯದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಪ್ರಕಾರ, ಈ ಬದಲಾವಣೆಯಿಂದಾಗಿ ಹೆಚ್ಚಿನ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅವಕಾಶ ಪಡೆಯಲಿದ್ದಾರೆ, ವಿಶೇಷವಾಗಿ ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಇದು ಪ್ರಯೋಜನಕಾರಿಯಾಗಲಿದೆ.