ಚಿತ್ರದುರ್ಗ: ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಚೇತನ್ನಿಂದಲೇ ವಿದ್ಯಾರ್ಥಿನಿ ವರ್ಷಿತಾ(19) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಡಿವೈಎಸ್ಪಿ ಪಿ.ದಿನಕರ್, ಗ್ರಾಮಾಂತರ ಠಾಣೆ ಸಿಪಿಐ ಮುದ್ದುರಾಜ್, ಪಿಎಸ್ಐ ಸುರೇಶ್ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ. ಆರೋಪಿಯ ಪ್ರತಿ ಜಾಡು ಹಿಡಿದು ತನಿಖೆ ಮಾಡಲಾಗುತ್ತಿದೆ. ಈ ಮಧ್ಯೆ ಕಿರಾತಕ ಚೇತನ್ ಪ್ರೀ ಪ್ಲ್ಯಾನ್ಡ್ ಮರ್ಡರ್ ರಹಸ್ಯ ಬಯಲಾಗಿದೆ. ವರ್ಷಿತಾ ಮತ್ತು ಚೇತನ್ ಜೊತೆಗಿದ್ದ ಕೊನೆ ಕ್ಷಣದ ಸಿಸಿಟಿವಿ ದೃಶ್ಯ ಲಭ್ಯವಾಗಿದೆ.
ಕೊಲೆಗೆ ಸಂಚು ರೂಪಿಸಿದ್ದ ಚೇತನ್
ವರ್ಷಿತಾ ಮತ್ತು ಚೇತನ್ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ. ಇತ್ತೀಚೆಗೆ ಚೇತನ್ಗೆ ಕ್ಯಾನ್ಸರ್ ಇರೋದು ಗೊತ್ತಾಗಿದೆ. ಬಳಿಕ ವರ್ಷಿತಾ ದೂರಾಗಿದ್ದು, ಮತ್ತೊಬ್ಬನನ್ನ ಪ್ರೀತಿಸುತ್ತಿದ್ದಳಂತೆ. ಈ ವಿಷಯ ತಿಳಿದು ಕೆರಳಿದ ಚೇತನ್, ನಯವಾಗಿ ಆಕೆಯನ್ನ ಗೋನೂರು ಬಳಿ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಕತ್ತು ಹಿಸುಕಿ ಕೊಂದಿದ್ದು, ಪೆಟ್ರೋಲ್ ಹಾಕಿ ಶವ ಸುಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ.
ಕೊಲೆ ಸಂಚು ರೂಪಿಸಿದ್ದ ಚೇತನ್ ಚಿತ್ರದುರ್ಗ ನಗರದ ತುರುವನೂರು ರಸ್ತೆ ಬಳಿಗೆ ಕರೆಸಿದ್ದಾನೆ. ಆಕೆ ಬರುವ ಮುನ್ನ ತುರುವನೂರು ರಸ್ತೆಯ ಖಾಸಗಿ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಖರೀದಿಸಿದ್ದ. ಪ್ಯಾಂಟ್ ಜೇಬಿನಲ್ಲಿ ಪೆಟ್ರೋಲ್ ಬಾಟಲಿ ಇರಿಸಿಕೊಂಡಿದ್ದ. ಇತ್ತ ಪ್ರಿಯಕರನ ಕ್ರಿಮಿನಲ್ ಬುದ್ಧಿ ಅರಿಯದ ವರ್ಷಿತಾ, ಆತನ ಬಣ್ಣದ ಮಾತಿಗೆ ಮರಳಾಗಿ ಬೆನ್ನುಹತ್ತಿದ್ದಳು.
ವರ್ಷಿತಾ ಬಂದ ಬಳಿಕ ನಡೆದುಕೊಂಡೇ ಗೋನೂರು ಕಡೆಗೆ ಪಯಣ ಬೆಳೆಸಿದ್ದಾರೆ. ಚೇತನ್ ಮುಂದೆ ನಡೆದರೆ ಹಿಂದೆ ವರ್ಷಿತಾ ಹೆಜ್ಜೆ ಹಾಕಿದ್ದಾಳೆ. ಗೋನೂರು ಬಳಿಗೆ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಹೊಡೆದು, ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ. ಬಳಿಕ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದ. ಆ.18ರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಕೃತ್ಯ ನಡೆದಿದೆ.
ಅದೇ ದಿನ ಸಂಜೆ ಬೈಕಿನಲ್ಲಿ ಹಾಲಿನ ಕ್ಯಾನ್ ಜತೆಗೆ ಬಂದಿದ್ದ ಚೇತನ್, ನಗರದಲ್ಲಿ ಹಾಲು ಹಾಕಿದ ಬಳಿಕ ಮತ್ತೆ ಪೆಟ್ರೋಲ್ ಖರಿದಿಸಿ ಮತ್ತೆ ಘಟನಾ ಸ್ಥಳಕ್ಕೆ ತೆರಳಿದ್ದಾನೆ. ಅರೆಬೆಂದಿದ್ದ ಮೃತ ದೇಹಕ್ಕೆ ಪೆಟ್ರೋಲ್ ಸುರಿದು ಮತ್ತೆ ಬೆಂಕಿ ಹಚ್ಚಿದ್ದಾನೆ.
For More Updates Join our WhatsApp Group :