ನವದೆಹಲಿ: PSI ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಪ್ರಕರಣದ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ಗೆ (RD Patil) ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ವೈದ್ಯಕೀಯ ಕಾರಣಗಳನ್ನು ನೀಡಿ ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಬಿಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ಜಾಮೀನು ನಿರಾಕರಿಸಿದೆ.
ಇಂದು ಆರ್‌ಡಿ ಪಾಟೀಲ್ ಪರ ವಾದ ಮಂಡಿಸಿದ ವಕೀಲರು, ನರಗಳ ಸಮಸ್ಯೆಯಿಂದ ಆರೋಗ್ಯದಲ್ಲಿ ಸಮಸ್ಯೆಯಾಗಿದೆ. ಕಳೆದ ಎರಡು ವರ್ಷದಿಂದ ನ್ಯಾಯಂಗ ಬಂಧನದಲ್ಲಿದ್ದೇನೆ. ಪ್ರಕರಣದಲ್ಲಿ 137 ಸಾಕ್ಷ್ಯಗಳಿದ್ದು, ವಿಚಾರಣೆ ವಿಳಂಬವಾಗಲಿದೆ. ನನ್ನ ಪಾಸ್‌ಪೋರ್ಟ್ ಕೋರ್ಟ್‌ಗೆ ಒಪ್ಪಿಸಿದ್ದೇನೆ. ಹೀಗಾಗಿ ನಾನು ತಲೆ ಮರೆಸಿಕೊಳ್ಳುವ ಪ್ರಶ್ನೆ ಇಲ್ಲ. ಚಿಕಿತ್ಸೆಗಾಗಿ ದಯವಿಟ್ಟು ಕನಿಷ್ಠ ಎಂಟು ವಾರಗಳ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು
ಆದರೆ ಇದಕ್ಕೆ ಸಿಜೆಐ ಬಿಆರ್ ಗವಾಯಿ ಆಕ್ಷೇಪ ವ್ಯಕ್ತಪಡಿಸಿದರು, ಕಳೆದ ಜನವರಿಯಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಒಂದು ವರ್ಷದ ಬಳಿಕ ಜಾಮೀನ ಅರ್ಜಿ ಸಲ್ಲಿಕೆಗೆ ಸೂಚಿಸಿತ್ತು. ಈಗ ಸಲ್ಲಿಕೆಯಾಗಿರುವ ವೈದ್ಯಕೀಯ ವರದಿಯಲ್ಲೂ ಆಪರೇಷನ್ ಅಗತ್ಯವಿಲ್ಲ ಎಂದು ಉಲ್ಲೇಖಿಸಿದೆ. ಹೀಗಾಗಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಅರ್ಜಿ ವಜಾ ಮಾಡಿದರು.
ಕರ್ನಾಟಕದಾದ್ಯಂತ 2023 ರ ಅಕ್ಟೋಬರ್ 28ರಂದು ಕೆಪಿಎಸ್‌ಸಿಯ ವಿವಿಧ ಇಲಾಖೆಗಳ ಪರೀಕ್ಷೆ ನಡೆದಿತ್ತು. ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ವಿಶ್ವವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಎಫ್‌ಡಿಎ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ಬ್ಲೂಟೂತ್ ಬಳಸಿ ನಕಲು ಮಾಡಲು ಯತ್ನಿಸಿದಾಗ ಸಿಕ್ಕಿಬಿದ್ದಿದ್ದರು. ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿತ್ತು. ವಿಚಾರಣೆ ನಡೆಸಿದ ಪೊಲೀಸರು, ಹಲವರನ್ನು ಬಂಧಿಸಿದ್ದರು. ಅಕ್ರಮದ ವಿಚಾರಣೆ ವೇಳೆ, ಪ್ರಕರಣದ ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಹೆಸರು ಹೊರಬಿದ್ದಿತ್ತು. ನಂತರ ಆತನನ್ನು ಬಂಧಿಸಲಾಗಿತ್ತು. ಬಳಿಕ ಪ್ರಕರಣದ ತನಿಖೆಯ ಹೊಣೆಯನ್ನು ಕರ್ನಾಟಕ ಸರ್ಕಾರ ಸಿಐಡಿಗೆ ವಹಿಸಿತ್ತು