ನವದೆಹಲಿ : ಪೋಕ್ಸೋ ಕೇಸ್ ವಿಚಾರದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಸುಪ್ರೀಂಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೈಸಿಂಗ್ ಜೊಯ್‌ಮಾಲ್ಯ ಅವರನ್ನೊಳಗೊಂಡ ಪೀಠ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ ನೀಡಿದೆ. ಸಿಐಡಿ ಮತ್ತು ಸಂತ್ರಸ್ತ ಬಾಲಕಿಗೆ ನೋಟಿಸ್ ಜಾರಿ ಮಾಡಿದೆ.
ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸಲು ನವೆಂಬರ್ 13ರಂದು ಕರ್ನಾಟಕ ಹೈಕೋರ್ಟ್ ನಿರಾಕಾರಿಸಿತ್ತು. ಆ ಬೆನ್ನಲ್ಲೇ ಬಿಎಸ್ವೈ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಯಡಿಯೂರಪ್ಪ ಪರ ವಾದಿಸಿದ ಹಿರಿಯ ವಕೀಲರಾದ ಸಿಧಾರ್ಥ ಲೂಥ್ರಾ ಮತ್ತು ಸಿಧಾರ್ಥ ದಾವೆ ಅವರು, ಹೈಕೋರ್ಟ್ನ ಫೆ.7, 2025ರ ತೀರ್ಪನ್ನು ತಪ್ಪಾಗಿ ಅರ್ಥೈಸಲಾಗಿದೆ. ಹಿಂದಿನ ಸುತ್ತಿನ ತೀರ್ಪಿನ ಕಾರಣ ನೀಡಿ ಹೈಕೋರ್ಟ್ ಪರಿಗಣಿಸಿಲ್ಲ. ಯಡಿಯೂರಪ್ಪ ಅವರ ಅರ್ಜಿಯನ್ನು ಅರ್ಹತೆ ಆಧಾರದಲ್ಲಿ ಪರಿಗಣಿಸಿಲ್ಲ. ಅವರು 88 ವರ್ಷದ ಹಿರಿಯ ವ್ಯಕ್ತಿ, ನಾಲ್ಕು ಬಾರಿ ಮುಖ್ಯಮಂತ್ರಿ. ರಾಜಕೀಯ ದ್ವೇಷದಿಂದ ನರಳುತ್ತಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದಾರೆ. ಈ ವೇಳೆ, ಹೈಕೋರ್ಟ್ನಲ್ಲಿ ಹೊಸದಾಗಿ ತೀರ್ಮಾನಿಸಲು ಏಕೆ ಸೂಚಿಸಬಾರದು ಎಂದು ಪೀಠ ಪ್ರತಿವಾದಿಗಳನ್ನು ಪ್ರಶ್ನಿಸಿದೆ.
ಪ್ರಕರಣ ಏನು?
ಕಳೆದ ವರ್ಷದ ಫೆಬ್ರವರಿಯಲ್ಲಿ ಬೆಂಗಳೂರಿನ ತಮ್ಮ ನಿವಾಸದಲ್ಲಿ 17 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿತ್ತು. ಸಂತ್ರಸ್ತೆಯ ತಾಯಿಯೇ ಈ ಬಗ್ಗೆ ಆರೋಪಿಸಿದ್ದರು. ಮಾರ್ಚ್ 14, 2024ರಂದು ಸದಾಶಿವನಗರ ಪೊಲೀಸರಿಂದ ಬಿಎಸ್ವೈ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ, ಮುಂದಿನ ತನಿಖೆಗಾಗಿ ಇದನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಸಿಐಡಿ ಮರು FIR ದಾಖಲಿಸಿ, ತನಿಖೆ ನಡೆಸಿ ಚಾರ್ಜ್ಶೀಟ್ ಸಲ್ಲಿಸಿತ್ತು.
For More Updates Join our WhatsApp Group :
