ಗ್ರಾಮಾಂತರ ಪ್ರದೇಶದ ಜಾಹೀರಾತುಗಳಿಗೂ ಟ್ಯಾಕ್ಸ್ ವಿಧಿಸಲು ಸರ್ಕಾರದ ಮುಂದಾಳತ್ವ
ಬೆಂಗಳೂರು: ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ವಿಧಾನ ಪರಿಷತ್ನಲ್ಲಿ ಕರ್ನಾಟಕ ಮುನ್ಸಿಪಾಲಿಟಿ ಮತ್ತು ಕೆಲವು ಇತರೆ ಕಾನೂನು(ತಿದ್ದುಪಡಿ) ವಿಧೇಯಕ-2026 ಅಂಗೀಕಾರಗೊಂಡಿದೆ. ಗ್ರಾಮಾಂತರ ಪ್ರದೇಶದಲ್ಲಿ ಮನೆಗೆ ಹಾಕಿದ ಜಾಹೀರಾತಿಗೂ ತೆರಿಗೆ ವಿಧಿಸಲು ಮುಂದಾಗಿದ್ದು, ಜೀವನಕ್ಕೆ ಏನೋ ಮಾಡಿಕೊಂಡಿರುವವರಿಗೂ ಟ್ಯಾಕ್ಸ್ ಹಾಕುವಷ್ಟು ಸರ್ಕಾರ ಬರಗೆಟ್ಟಿದ್ಯಾ ಎಂದು ವಿರೋಧ ಪಕ್ಷಗಳ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ.
ರಾಜಕಾರಣಿಗಳು ಫ್ಲೆಕ್ಸ್ ಹಾಕ್ತಾರೆ, ಅವರಿಗೆ ಯಾವುದೇ ಟ್ಯಾಕ್ಸ್ ಇಲ್ಲ. ಹೀಗಿರುವಾಗ ಖಾಸಗಿಯಾಗಿ ಮನೆ ಮೇಲೆ ಜಾಹೀರಾತು ಹಾಕಿಕೊಂಡ್ರೆ ನಿಮಗೇನು? ಎಂದು ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಸದಸ್ಯ ಎಸ್.ಎಲ್.ಭೋಜೇಗೌಡ ಪ್ರಶ್ನೆ ಮಾಡಿದ್ದಾರೆ. ಮನೆ ಮೇಲೆ ಜಾಹೀರಾತು ಹಾಕಿದ್ದಕ್ಕೆ ತೆರಿಗೆ ಬೇಕಾ, ನಾಚಿಕೆ ಆಗಲ್ವಾ? ಎಂದು ತಿವಿದಿದ್ದಾರೆ. ಈ ವೇಳೆ ಚಿಕ್ಕಮಗಳೂರಲ್ಲಿ ನಿಮ್ಮ, ಸಿ.ಟಿ. ರವಿ ಫೋಟೋ ಇದೆ ಎಂದು ಸಚಿವ ಭೈರತಿ ಸುರೇಶ್ ಹೇಳಿದ್ದು, ನೀವು ಹೇಳಿದಂತೆ ಎಲ್ಲಾ ಕಡೆ ನನ್ನ ಫೋಟೋ ಇದ್ದರೆ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಭೋಜೇಗೌಡ ಸವಾಲು ಹಾಕಿದ ಪ್ರಸಂಗವೂ ನಡೆದಿದೆ.
ಸಚಿವರ ಸಮರ್ಥನೆ
ವಿಪಕ್ಷಗಳ ಆಕ್ರೋಶದ ನಡುವೆಯೂ ತೆರಿಗೆ ವಿಧಿಸುವ ಸರ್ಕಾರದ ಕ್ರಮ ಸರಿಯಿದೆ ಎಂದು ನಗರಾಭಿವೃದ್ಧಿ ಸಚಿವರ ಭೈರತಿ ಸುರೇಶ್ ಸಮರ್ಥಿಸಿಕೊಂಡಿದ್ದು, ಟ್ಯಾಕ್ಸ್ ಸಂಗ್ರಹಿಸದೆ ನಗರ ಪಾಲಿಕೆಗಳನ್ನು ನಡೆಸುವುದು ಹೇಗೆ? ತೆರಿಗೆ ಬಾರದೆ ನೂರಾರು ಕೋಟಿ ರೂಪಾಯಿ ಲಾಸ್ ಆಗಿದೆ. ಸರ್ಕಾರಿ ಪ್ರಾಯೋಜಿತ ಜಾಹಿರಾತಿಗೆ ಟ್ಯಾಕ್ಸ್ ಇಲ್ಲ. ಆದರೆ ಖಾಸಗಿ ಜಾಗದಲ್ಲಿ ಜಾಹಿರಾತು ಹಾಕಿದ್ರೆ ಅದಕ್ಕೆ ಟ್ಯಾಕ್ಸ್ ಹಾಕ್ತೀವಿ. ಲಾಭಕ್ಕಾಗಿ ಅವರು ಜಾಹೀರಾತು ಹಾಕುವ ಕಾರಣ ಅವರು ಸಣ್ಣ ಪ್ರಮಾಣದ ತೆರಿಗೆ ಕಟ್ಟಬೇಕು. ಖಾಸಗಿ ಕಟ್ಟಡಗಳ ಮಾಲೀಕರಿಗೆ ನಾವು ಟ್ಯಾಕ್ಸ್ ಹಾಕಲ್ಲ. ಬದಲಾಗಿ ತೆರಿಗೆ ನೀಡಬೇಕಿರೋದು ಕಂಪನಿಗಳು ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಈ ರೀತಿಯ ತೆರಿಗೆ ಹೊಸದೇನಲ್ಲ. ಹಿಂದೆಯೂ ಇತ್ತು, ಅದಕ್ಕೆ ಈಗ ತಿದ್ದುಪಡಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
For More Updates Join our WhatsApp Group :




