ಒಂದೇ ದಿನ ಕಣಕ್ಕಿಳಿಯುವ ಟೀಂ ಇಂಡಿಯಾ 2 ತಂಡಗಳು: ಪುರುಷರ ಸವಾಲು, ಮಹಿಳೆಯರ ‘ಮಾಡು ಇಲ್ಲವೇ ಮಡಿ’ ಪಂದ್ಯ!

ಒಂದೇ ದಿನ ಕಣಕ್ಕಿಳಿಯುವ ಟೀಂ ಇಂಡಿಯಾ 2 ತಂಡಗಳು: ಪುರುಷರ ಸವಾಲು, ಮಹಿಳೆಯರ ‘ಮಾಡು ಇಲ್ಲವೇ ಮಡಿ’ ಪಂದ್ಯ!

ಅಕ್ಟೋಬರ್ 19ರಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ದ್ವಿಗುಣ ಮನರಂಜನೆ ಲಭ್ಯ. ಭಾರತ ಪುರುಷರ ತಂಡ ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ಏಕದಿನ ಸರಣಿ ಆರಂಭಿಸಿದರೆ, ಮಹಿಳಾ ತಂಡ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ‘ಮಾಡು ಇಲ್ಲವೇ ಮಡಿ’ ಪಂದ್ಯವಾಡಲಿದೆ. ಸೆಮಿಫೈನಲ್ ಸ್ಥಾನಕ್ಕೆ ಭಾರತ ವನಿತೆಯರಿಗೆ ಗೆಲುವು ಅನಿವಾರ್ಯ. ರೋಹಿತ್-ಕೊಹ್ಲಿ ತಂಡವೂ ಆಸೀಸ್ ನೆಲದಲ್ಲಿ ಸವಾಲು ಎದುರಿಸಲಿದೆ. ಕ್ರಿಕೆಟ್ ಪ್ರೇಮಿಗಳಿಗೆ ರೋಮಾಂಚನಕಾರಿ ಭಾನುವಾರ ನಿಶ್ಚಿತ.

ಅಕ್ಟೋಬರ್ 19 ರ ಭಾನುವಾರದಂದು ಭಾರತದ ಕ್ರಿಕೆಟ್ ಪ್ರಿಯರಿಗೆ ಮನರಂಜನೆಯ ರಸದೌತಣ ಸಿಗಲಿದೆ. ಏಕೆಂದರೆ ಈ ದಿನದಂದು ಭಾರತದ ಎರಡು ತಂಡಗಳು ಎರಡು ಬಲಿಷ್ಠ ತಂಡಳೆದುರು ಪಂದ್ಯಗಳನ್ನಾಡಲಿವೆ. ಒಂದೆಡೆ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿರುವ ಭಾರತದ ಪುರುಷರ ತಂಡ ತನ್ನ ಮೊದಲ ಪಂದ್ಯವನ್ನು ಪರ್ತ್​ ಮೈದಾನದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಮತ್ತೊಂದೆಡೆ ಭಾರತದಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್​ನಲ್ಲಿ ಭಾರತ ಮಹಿಳಾ ತಂಡ ತನ್ನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಸೆಮಿಫೈನಲ್ ದೃಷ್ಟಿಯಿಂದ ಹರ್ಮನ್​ಪ್ರೀತ್ ಕೌರ್ ಪಡೆಗೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡ ಎದುರಾಗಿದೆ.

ಭಾರತ- ಇಂಗ್ಲೆಂಡ್ ಮುಖಾಮುಖಿ

ವಾಸ್ತವವಾಗಿ ಮಹಿಳಾ ವಿಶ್ವಕಪ್​ನಲ್ಲಿ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಭಾರತ ಮಹಿಳಾ ತಂಡ, ಆ ಬಳಿಕ ನಡೆದ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. ಹೀಗಾಗಿ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತ ತಂಡ ಸೆಮಿಫೈನಲ್​ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಾದರೆ, ಇಂಗ್ಲೆಂಡ್ ವಿರುದ್ಧದ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ವಿಶ್ವಕಪ್ ಗೆಲ್ಲುವ ಪ್ರಬಲ ಸ್ಪರ್ಧಿಯಾಗಿ ಅಖಾಡಕ್ಕಿಳಿದಿದ್ದ ಟೀಂ ಇಂಡಿಯಾಕ್ಕೆ ಸತತ ಎರಡು ಸೋಲುಗಳು ಆಘಾತ ತಂದೊಡ್ಡಿದೆ.

ಹರ್ಮನ್ ಪಡೆಗೆ ಗೆಲ್ಲಲೇಬೇಕಾದ ಒತ್ತಡ

ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು 59 ರನ್​ಗಳಿಂದ ಮಣಿಸಿದ ಭಾರತ ವನಿತಾ ತಂಡ, ತನ್ನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಏಕಪಕ್ಷೀಯ ರೀತಿಯಲ್ಲಿ ಸೋಲಿಸಿತ್ತು. ಈ ಎರಡು ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ಕೈಕೊಟ್ಟಿತ್ತಾದರೂ, ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ಮೂಡಿಬಂದಿತ್ತು. ಆದರೆ ಆ ಬಳಿಕ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲೂ ಬ್ಯಾಟಿಂಗ್ ವಿಭಾಗ ಕೈಕೊಟ್ಟಿತು. ಆದಾಗ್ಯೂ ಕೊನೆಯವರೆಗೂ ಗೆಲುವಿಗಾಗಿ ಹೋರಾಟ ನೀಡಿದ ಬೌಲಿಂಗ್ ವಿಭಾಗ ಪಂದ್ಯವನ್ನು ಗೆಲ್ಲಿಸುವುದರಲ್ಲಿ ವಿಫಲವಾಗಿತ್ತು. ತನ್ನ ನಾಲ್ಕನೇ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಿದ್ದ ಭಾರತ ತಂಡಕ್ಕೆ ಬ್ಯಾಟಿಂಗ್ ವಿಭಾಗ ಕೈಹಿಡಿಯಿತ್ತಾದರೂ, ಆಸ್ಟ್ರೇಲಿಯಾದ ಬ್ಯಾಟಿಂಗ್ ವಿಭಾಗವನ್ನು ಕಟ್ಟಿಹಾಕುವಲ್ಲಿ ಬೌಲರ್​ಗಳು ಎಡವಿದ್ದರು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ತನ್ನ ಐದನೇ ಪಂದ್ಯದಲ್ಲಿ ಭಾರತ ತಂಡ ಸಾಂಘಿಕ ಪ್ರದರ್ಶನ ನೀಡಿ ಗೆಲುವು ಧಕ್ಕಿಸಿಕೊಳ್ಳಬೇಕಾಗಿದೆ. ಈ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ.

ಭಾರತ- ಆಸೀಸ್ ಏಕದಿನ ಪಂದ್ಯ

ಇತ್ತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುತ್ತಿರುವ ಭಾರತ ಪುರುಷರ ತಂಡ, ಕಾಂಗರೂ ತಂಡವನ್ನು ಅವರ ನೆಲದಲ್ಲಿ ಮಣಿಸುವ ಕಠಿಣ ಸವಾಲು ಎದುರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಆಸೀಸ್ ತಂಡದ ವಿರುದ್ಧ ಪ್ರಬಲ ಪ್ರದರ್ಶನ ನೀಡುತ್ತಿರುವ ಭಾರತ ತಂಡಕ್ಕೆ, ಏಕದಿನ ವಿಶ್ವಕಪ್ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ಹಾಗೆಯೇ 7 ತಿಂಗಳ ನಂತರ ಕ್ರಿಕೆಟ್​ಗೆ ಮರಳಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಮ್ಮ ಅನುಭವವನ್ನು ಧಾರೆ ಎರೆದು ಯುವ ತಂಡವನ್ನು ಗೆಲುವಿನತ್ತ ಕೊಂಡೊಯ್ಯಬೇಕಾಗಿದೆ. ಈ ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದೆ. ಹೀಗಾಗಿ ಟೀಂ ಇಂಡಿಯಾ ಅಭಿಮಾನಿಗಳು ಭಾನುವಾರ ಬೆಳಿಗ್ಗೆ ಪುರುಷರ ಕ್ರಿಕೆಟ್​ ಅನ್ನು ಆನಂದಿಸಿದರೆ, ಮಧ್ಯಾಹ್ನದ ಬಳಿಕ ಮಹಿಳಾ ತಂಡದ ಆಟವನ್ನು ಕಣ್ತುಂಬಿಕೊಳ್ಳಬಹುದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *