NEET ಅಕ್ರಮ ಕುರಿತ ಚರ್ಚೆಗೆ ಪ್ರತಿಪಕ್ಷಗಳ ಬಿಗಿಪಟ್ಟು, ಗದ್ದಲ

ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ NEET ಅಕ್ರಮ ಕುರಿತ ಚರ್ಚೆಗೆ ಪ್ರತಿಪಕ್ಷಗಳ ಬಿಗಿಪಟ್ಟು ಹಿಡಿದ್ದರಿಂದ ಗದ್ದಲ ಉಂಟಾಗಿ ಲೋಕಸಭೆ ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ, ತದನಂತರ ಸೋಮವಾರಕ್ಕೆ ಮುಂದೂಡಲಾಯಿತು.

ಮಧ್ಯಾಹ್ನ 12 ಗಂಟೆಗೆ ಕಲಾಪ ಪುನರ್ ಸಮಾವೇಶಗೊಳ್ಳುತ್ತಿದ್ದಂತೆಯೇ NEET ಅಕ್ರಮ ಕುರಿತ ಚರ್ಚಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರೆಸಿದವು

ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ವೇಳೆ ಚರ್ಚಿಸಬಹುದೆಂದು ಸ್ಪೀಕರ್ ಓಂ ಬಿರ್ಲಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಪ್ರತಿಪಕ್ಷ ಸದಸ್ಯರಿಗೆ ಹೇಳಿದರು. ಅವರ ಮಾತಿಗೆ ಸೊಪ್ಪು ಹಾಕದ ಕಾಂಗ್ರೆಸ್, ಟಿಎಂಸಿ ಮತ್ತು ಡಿಎಂಕೆ ಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ರಾಷ್ಟ್ರಪತಿಗಳ ಭಾಷಣಕ್ಕೆ ನಿರ್ಣಯ ಸಲ್ಲಿಸುವ ವೇಳೆ ಪ್ರತಿಪಕ್ಷಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಾಗುವುದು ಎಂದು ಕಿರಣ್ ರಿಜಿಜು ಹೇಳಿದರು. ಆದರೆ ಪ್ರತಿಪಕ್ಷಗಳ ಸದಸ್ಯರು ಘೋಷಣೆ ಕೂಗುತ್ತಾ, ಪ್ರತಿಭಟನೆ ಮುಂದುವರೆಸಿದ್ದರಿಂದ ಸದನದಲ್ಲಿ ಗದ್ದಲ ಉಂಟಾಯಿತು. ಇದರಿಂದಾಗಿ ಸ್ಪೀಕರ್ ಓಂ ಬಿರ್ಲಾ ಅವರು ಸೋಮವಾರದವರೆಗೂ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

ಅತ್ತ ರಾಜ್ಯಸಭೆಯಲ್ಲೂ NEET ಪರೀಕ್ಷೆ ಕುರಿತು ಅಕ್ರಮ ಸಂಬಂಧ ಕೂಡಲೇ ಚರ್ಚೆ ನಡೆಯಬೇಕೆಂದು ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ ಮಧ್ಯಾಹ್ನದವರೆಗೂ ಕಲಾಪನ್ನು ಸಭಾಪತಿ ಜಗದೀಪ್ ಧನಕರ್ ಮುಂದೂಡಿದರು.

ಕಲಾಪ ಆರಂಭವಾಗುತ್ತಿದ್ದಂತೆಯೇ ಚರ್ಚೆಗೆ ಅವಕಾಶ ಕೊಡಬೇಕು ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಭಾಪತಿಯನ್ನು ಒತ್ತಾಯಿಸಿದರು. ಆದಾಗ್ಯೂ, ಒಪ್ಪಿಗೆ ನೀಡದ ಧನಕರ್, ಬಿಜೆಪಿ ನಾಯಕ ಸುಧಾಂಶು ತ್ರಿವೇದಿ ಮಾತನಾಡುವಂತೆ ಹೇಳಿದರು. ಇದನ್ನು ವಿರೋಧಿಸಿ ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

Leave a Reply

Your email address will not be published. Required fields are marked *