ಅಪ್ಪನ ಸಾವಿನಿಂದ ಬಯಲಾಯ್ತು ಮಗನ ಹ* ರಹಸ್ಯ! ಉತ್ಖನನ ನಡೆಸಿದಾಗ ಸಿಕ್ತು ಅಸ್ಥಿಪಂಜರ.

ಅಪ್ಪನ ಸಾವಿನಿಂದ ಬಯಲಾಯ್ತು ಮಗನ ಹ* ರಹಸ್ಯ! ಉತ್ಖನನ ನಡೆಸಿದಾಗ ಸಿಕ್ತು ಅಸ್ಥಿಪಂಜರ.

ಹಾಸನ : ಅತ್ತ ನೂರಾರು ಶವಗಳನ್ನು ಹೂಳಿದ್ದೆ ಎಂಬ ಅನಾಮಿಕನ ದೂರು ಆಧರಿಸಿ ಧರ್ಮಸ್ಥಳದಲ್ಲಿ ಅಸ್ಥಿಪಂಜರಕ್ಕಾಗಿ ಶೋಧ ನಡೆಯುತ್ತಿದ್ದರೆ, ಇತ್ತ ಹಾಸನದಲ್ಲೊಂದು ಉತ್ಖನನ ನಡೆದಿದ್ದು, ಎರಡು ವರ್ಷಗಳ ಹಿಂದೆ ಮಣ್ಣಿನಡಿ ಅಡಗಿದ್ದ ಕೊಲೆ ರಹಸ್ಯವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಜನ್ಮನೀಡಿದ ಮಗನನ್ನೇ ಕೊಂದು ಶವ ಹೂತು ಹಾಕಿದ್ದ ತಂದೆಯ ಪಾತಕ ಆತನ ಸಾವಿನ ನಂತರ ಬಯಲಾಗಿದೆ! ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಸಂತೆಬಸವನಹಳ್ಳಿ ಗ್ರಾಮದ ಗಂಗಾಧರ್ (55) ಅಗಸ್ಟ್ 2ರಂದು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಗಂಗಾಧರ್ ಅವರ ಇಬ್ಬರು ಮಕ್ಕಳಲ್ಲಿ ಒಬ್ಬಾತ ಬೆಂಗಳೂರಿನ ಬಿಎಂಟಿಸಿಯಲ್ಲಿ ಕೆಲಸಲ್ಲಿದ್ದು, ಅಪ್ಪನ ಸಾವಿಗೂ ಬಂದಿಲ್ಲ. ಮನೆಯಲ್ಲೇ ಇದ್ದ ಕಿರಿಯ ಮಗ ರೂಪೇಶ್ನೇ ಎಲ್ಲಾ ಕಾರ್ಯ ಮಾಡಿದಾಗ ಬಂದ ನೆಂಟರಿಗೂ ಅನುಮಾನ ಮೂಡಿದೆ. ಅಪ್ಪ ಸತ್ತಾಗಲೂ ಬಾರದ ಇವನೆಂಥಾ ಮಗ ಎಂದು ಆತನನ್ನೇ ಶಪಿಸಿ, ಮೂರನೇ ದಿನದ ಹಾಲು ತುಪ್ಪಕಾರ್ಯಕ್ಕಾದರೂ ಅವನನ್ನು ಕರೆಸು ಎಂದು ತಮ್ಮನಿಗೆ ಒತ್ತಡ ಹಾಕಿದ್ದಾರೆ. ಒತ್ತಡ ಹೆಚ್ಚಾದಾಗ ಯಾವ್ಯಾವುದೋ ನಂಬರ್ ಕೊಟ್ಟು ದಾರಿ ತಪ್ಪಿಸಲು ಯತ್ನಿಸಿದ ಪುತ್ರ ರೂಪೇಶ್ ಮೇಲೆಯೇ ಅನುಮಾನಗೊಂಡ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಎಚ್ಚೆತ್ತ ಅಲೂರು ಠಾಣೆ ಪೊಲೀಸರು ರೂಪೇಶ್ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಗಂಗಾಧರ್ ಹಿರಿಯ ಪುತ್ರ ರಘು(32) ಸಾವಿನ ರಹಸ್ಯ ಬಯಲಾಗಿದೆ.

ಹಣ ಕೇಳಿದ ಮಗನನ್ನೇ ಬಡಿದು ಕೊಲೆ ಮಾಡಿದ್ದ ಗಂಗಾಧರ್!

ಎರಡು ವರ್ಷಗಳ ಹಿಂದೆ, ಹಣ ಕೇಳಿದ್ದಕ್ಕಾಗಿ ಮಗನನ್ನು ಬಡಿದು ಕೊಲೆ ಮಾಡಿದ್ದ ಗಂಗಾಧರ್, ಎರಡು ದಿನ ಶವವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ. ಮೂರನೇ ದಿನ ಕಿರಿಯ ಮಗನನ್ನು ಹೆದರಿಸಿ ಬೆದರಿಸಿ ಮನೆಯ ಹಿಂಭಾಗದ ಇಂಗು ಗುಂಡಿಯಲ್ಲಿ ಶವ ಹೂತು ಹಾಕಿದ್ದ ಎನ್ನಲಾಗಿದೆ. ಶವವನ್ನೇ ಇಲ್ಲವಾಗಿಸಿ ನೆಮ್ಮದಿಯಾಗಿದ್ದ ತಂದೆಯ ಸಾವಿನ ಬಳಿಕ ಆತ ಹಿಂದೆ ಎಸಗಿದ್ದ ಪಾತಕ ಬಯಲಾಗಿದೆ.

ಐದಾರು ಎಕರೆ ಫಲವತ್ತಾದ ಜಮೀನು. ಮನೆ ಬಳಿಯೇ ವ್ಯಾಪಾರ ಮಾಡಲು ಒಂದು ಅಂಗಡಿ, ಬದುಕಿಗೆ ಏನೂ ಸಮಸ್ಯೆ ಇಲ್ಲ ಎನ್ನುವಷ್ಟು ಇದ್ದ ಕುಟುಂಬ ಗಂಗಾಧರ್ನದ್ದು. ಐದು ವರ್ಷಗಳ ಹಿಂದೆ ಮನೆಯ ಯಜಮಾನಿ ತೀರಿಕೊಂಡಾಗ ಮನೆಯಲ್ಲಿ ಮೂವರು ಗಂಡಸರೇ ಆಗಿದ್ದಾರೆ. ಕೂಡಲೇ ಹಿರಿಯ ಮಗ ರಘುಗೆ ಮಧುವೆ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ರಘು ಸಂಸಾರದಲ್ಲಿ ಹೊಂದಾಣಿಕೆ ಆಗದೆ ಗಂಡ ಹೆಂಡತಿ ನಡುವೆ ವಿಚ್ಚೇಧನವಾಗಿತ್ತು. ಇದಾದ ಬಳಿಕ ಅನಾರೋಗ್ಯದಿಂದ ಊರು ಸೇರಿದ್ದ ರಘು ತಂದೆ ಬಳಿ ಹಣ ಇದೆ ಎಂದು ಹಣಕ್ಕಾಗಿ ಒತ್ತಾಯಿಸಿದ್ದ. ಆ ಸಂದರ್ಭದಲ್ಲಿ ಮಗನ ಮೇಲೆ ಹಲ್ಲೆ ಮಾಡಿದ್ದ ಗಂಗಾಧರ್, ಆತನನ್ನು ಕೊಲೆ ಮಾಡಿದ್ದಾನೆ.

ಕಿರಿಯ ಮಗನಿಗೂ ಕೊಲೆ ಬೆದರಿಕೆ ಹಾಕಿದ್ದ ಗಂಗಾಧರ್

ರಘು ಕೊಲೆ ವಿಚಾರ ಕಿರಿಯ ಮಗ ರೂಪೇಶ್ಗೆತಿಳಿದಾಗ ಆತನಿಗೂ ರಘು ಕೊಲೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಯಾರಿಗಾದರೂ ಈ ವಿಚಾರದ ಬಗ್ಗೆ ಬಾಯಿ ಬಿಟ್ಟರೆ ನಿನ್ನನ್ನೂ ಹೀಗೆಯೇ ಕೊಲೆ ಮಾಡುವೆ ಎಂದು ತಂದೆ ಬೆದರಿಸಿದ್ದಾಗಿ ರೂಪೇಶ್ ಈಗ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಹುಟ್ಟಿನಿಂದಲೂ ವಿಶೇಷ ಚೇತನನಾಗಿರುವ ರೂಪೇಶ್ ಅಣ್ಣನ ಶವವನ್ನ ಹೂಳಲು ತಂದೆಗೆ ತೆರವಾಗಿದ್ದು, ಯಾರಿಗೂ ವಿಚಾರ ಹೇಳದೆ ಸುಮ್ಮನಾಗಿದ್ದಾನೆ.

ಮಗ ಬೆಂಗಳೂರಿನಲ್ಲಿದ್ದಾನೆ ಎನ್ನುತ್ತಿದ್ದ ಗಂಗಾಧರ್

ಈನಡುವೆ, ಹಿರಿಯ ಮಗನ ಬಗ್ಗೆ ಯಾರಾದರೂ ವಿಚಾರಿಸಿದರೆ, ಐವತ್ತು ಸಾವಿರ ರೂಪಾಯಿ ಹಣ ಕೊಟ್ಟು ಕಳುಹಿಸಿದ್ದೇನೆ. ಬೆಂಗಳೂರಿನಲ್ಲಿ ಎಲ್ಲೋ ಇದ್ದಾನೆ ಎಂದು ಗಂಗಾದರ್ ಹೇಳುತ್ತಿದ್ದ. ಆದರೆ, ಯಾವಾಗ ಗಂಗಾಧರ್ ಅನಾರೋಗ್ಯದಿಂದ ಮೃತಪಟ್ಟನೋ ಆಗ ಆತನ ಮಗನ ಕೊಲೆ ರಹಸ್ಯ ಬಯಲಾಗಿದೆ.

ಉತ್ಖನನ ನಡೆಸಿದಾಗ ಸಿಕ್ತು ಅಸ್ಥಿಪಂಜರ

ರೂಪೇಶ್ ಹೇಳಿಕೆಯಂತೆ ಆತನ ಸಂಬಂಧಿಕರು ನೀಡಿದ ದೂರು ಆಧರಿಸಿ ಆಲೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆಲೂರು ಪೊಲೀಸರು ಸಕಲೇಶಪುರ ಎಸಿ, ಹಾಸನದ ವಿಧಿ ವಿಜ್ಞಾನ ಪ್ರಯೋಗಾಲಯದ ವೈದ್ಯರ ತಂಡದ ಸಮ್ಮುಖದಲ್ಲಿ ಕಿರಿಯ ಪುತ್ರ ರೂಪೇಶ್ ತೋರಿಸಿದ ಜಾಗದಲ್ಲಿ ಉತ್ಖನನ ನಡೆಸಿದ್ದಾರೆ. ಆಗ ವ್ಯಕ್ತಿಯ ಸಂಪೂರ್ಣ ಅಸ್ಥಿಪಂಜರ ಪತ್ತೆಯಾಗಿದೆ. ಸದ್ಯ ಎಲ್ಲಾ ಮೂಳೆಗಳನ್ನು ಸಂಗ್ರಹ ಮಾಡಿರುವ ತಜ್ಞರು ಅದನ್ನು ಹಿಮ್ಸ್ಗೆ ಸ್ಥಳಾಂತರ ಮಾಡಿದ್ದಾರೆ. ಘಟನೆ ಸಂಬಂದ ಕೊಲೆ ಕೇಸ್ ದಾಖಲು ಮಾಡಿಕೊಂಡು ರೂಪೇಶ್ನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *