ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಇಂದು ಬಿಡುಗಡೆ ಆಗಿದೆ. ಆಂಧ್ರ ಪ್ರದೇಶದ ವಿಧಾನಸಭೆ ಚುನಾವಣೆಗೆ ಮುನ್ನ ಪ್ರಾರಂಭವಾಗಿದ್ದ ಸಿನಿಮಾ, ಪವನ್ ಕಲ್ಯಾಣ್ ಡಿಸಿಎಂ ಆಗಿ ವರ್ಷದ ಬಳಿಕ ಬಿಡುಗಡೆ ಆಗಿದೆ. ಈ ವ್ಯತ್ಯಾಸ ಸಿನಿಮಾದಲ್ಲಿಯೂ ಸ್ಪಷ್ಟವಾಗಿ ಕಾಣುತ್ತದೆ. ಸಿನಿಮಾದ ಮೊದಲಾರ್ಧ ರಂಜನೀಯ ಸಿನಿಮಾ ಆಗಿದ್ದರೆ ದ್ವಿತೀಯಾರ್ಧ ಧರ್ಮ ರಕ್ಷಕನ ಕತೆ ಆಗಿದೆ. ಆದರೆ ಆ ಧರ್ಮ ರಕ್ಷಕನ ಕತೆಯಲ್ಲೂ ಹಲವು ಕೊರತೆಗಳಿವೆ.

‘ಹರಿ ಹರ ವೀರ ಮಲ್ಲು’, 16ನೇ ಶತಮಾನದ ಕತೆ. ವೀರ ಮಲ್ಲು ಒಬ್ಬ ‘ಆದರ್ಶವಾದಿ, ಉದಾರವಾದಿ’ ಕಳ್ಳ! ಉಳ್ಳವರ ಬಳಿ ದೋಚಿ ಅದನ್ನು, ಅವರಿಗೇ ವಾಪಸ್ ನೀಡಿ, ಅವರಿಂದ ಪಡೆದ ಹಣವನ್ನು ಬಡವರಿಗೆ ನೀಡುವ ‘ರಾಬಿನ್ ಹುಡ್’. ಮೊದಲಾರ್ಧ ಅವನ ವಜ್ರದ ಕಳ್ಳತನದ ಕತೆಯೇ ಇದೆ. ಅವನಿಗೆ ನಾಲ್ವರು ಸಹಚರರು ಇದ್ದಾರೆ. ಮೊದಲಾರ್ಧದ ಕತೆ ರಂಜನೀಯವಾಗಿದೆ. ಕುತೂಹಲಭರಿತವಾಗಿ ನೋಡಿಸಿಕೊಳ್ಳುತ್ತದೆ. ಮೊದಲಾರ್ಧದ ಅಂತ್ಯದ ವೇಳೆಗೆ ವೀರಮಲ್ಲುಗೆ ಒಂದು ದೊಡ್ಡ ‘ಟಾಸ್ಕ್’ ಸಿಗುತ್ತದೆ. ಆ ಟಾಸ್ಕ್ ಪೂರ್ಣಗೊಳಿಸಲು ವೀರಮಲ್ಲು ದೆಹಲಿ ಹಾದಿ ಹಿಡಿಯುತ್ತಾನೆ, ಸಿನಿಮಾದ ಹಾದಿ ತಪ್ಪುವುದೂ ಅಲ್ಲಿಯೇ.
ಮೊದಲಾರ್ಧ ಸಮಾಜವಾದಿಯಾಗಿದ್ದ ವೀರಮಲ್ಲು ದ್ವಿತೀಯಾರ್ಧದಲ್ಲಿ ಧರ್ಮ ರಕ್ಷಕನಾಗುತ್ತಾನೆ. ವಜ್ರಗಳನ್ನು ಕದ್ದಿದ್ದು ಸಹ ಆತನ ‘ಧರ್ಮ ರಕ್ಷಣೆ’ ಕಾರ್ಯದ ಭಾಗವೇ ಎಂದು ನಿರ್ದೇಶಕರು ಫ್ಲಾಶ್ಬ್ಯಾಕ್ ಬಳಸಿ ಹೇಳುತ್ತಾರೆ. ಮೊಘಲರು ಹಿಂದುಗಳ ಮೇಲೆ ಮಾಡಿದ ದೌರ್ಜನ್ಯದ ಕತೆಗಳು ಇತ್ತೀಚೆಗೆ ಹೆಚ್ಚು ಮುನ್ನೆಲೆಗೆ ಬರುತ್ತಿವೆ. ಸಿನಿಮಾಗಳಲ್ಲಿ, ಯೂಟ್ಯೂಬ್ಗಳಲ್ಲಿ ಈ ದೌರ್ಜನ್ಯದ ಕತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಪಠ್ಯಗಳಲ್ಲಿಯೂ ಸೇರಿಸಲಾಗಿದೆ. ಈ ಸಿನಿಮಾ ಸಹ ಮೊಘಲರ ದೌರ್ಜನ್ಯದ ಕತೆ ಹೇಳಿದೆ. ಆದರೆ ಹೇಳಿರುವ ರೀತಿ ಮನಸ್ಸಿಗೆ ತಟ್ಟುವಂತಿಲ್ಲ ಬದಲಿಗೆ ಕ್ಲೀಷೆ ಎನಿಸುವಂತಿದೆ.
ಮೊಘಲರ ದೌರ್ಜನ್ಯದ ಕತೆಗಿಂತಲೂ ನಾಯಕನ ವಿಜೃಂಭಿಸುವುದೇ ನಿರ್ದೇಶಕರ ಆದ್ಯತೆ ಆಗಿರುವುದು ದ್ವಿತೀಯಾರ್ಧದಲ್ಲಿ ಎದ್ದು ಕಾಣುತ್ತದೆ. ಸ್ವತಃ ಪವನ್ ಕಲ್ಯಾಣ್ ಅವರೇ ಹೇಳಿಕೊಂಡಿರುವಂತೆ ಸಿನಿಮಾದ ಕೊನೆಯ 20 ನಿಮಿಷ ಅವರೇ ಕೊರಿಯೋಗ್ರಾಫ್ ಅಥವಾ ನಿರ್ದೇಶನ ಮಾಡಿದ್ದಾರಂತೆ. ಅವರು ಅವರಿಗಾಗಿಯೇ ನಿರ್ದೇಶನ ಮಾಡಿಕೊಂಡಿರುವುದು ಕೊನೆಯ 20 ನಿಮಿಷದ ಪ್ರತಿ ದೃಶ್ಯದಲ್ಲೂ ಕಾಣುತ್ತದೆ. ಸಿನಿಮಾದ ದ್ವಿತೀಯಾರ್ಧದಲ್ಲಿ ‘ರಾಜಕಾರಣಿ ಪವನ್’ ಹಲವೆಡೆ ಇಣುಕುತ್ತಾರೆ.