ಮಂಗಳೂರು: ರಸ್ತೆ ದಾಟುತ್ತಿದ್ದ ವೇಳೆ ನಡೆದ ಅಪಘಾತದಲ್ಲಿ ರಿಕ್ಷಾದಡಿ ಬಿದ್ದ ತಾಯಿಯನ್ನು ಕ್ಷಣಾರ್ಧದಲ್ಲಿ ರಕ್ಷಿಸಿದ ಬಾಲಕಿಯ ಧೈರ್ಯ ಮತ್ತು ಸಮಯ ಪ್ರಜ್ಞೆಯನ್ನು ಸಿಎಂ ಸಿದ್ಧರಾಮಯ್ಯ ಶ್ಲಾಘಿಸಿದ್ದಾರೆ. 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿ ವೈಭವಿ ಬಗ್ಗೆ ಸಿಎಂ ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಘಟನೆಯ ವಿಡಿಯೋ ಸಹಿತ ಪೋಸ್ಟ್ ಮಾಡಿರುವ ಸಿಎಂ, ‘ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಸಮೀಪ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಆಟೋವೊಂದು ಡಿಕ್ಕಿ ಹೊಡೆದಿದೆ. ಅಲ್ಲೇ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪುಟ್ಟ ಬಾಲಕಿಯೊಬ್ಬಳು ಯಾರ ಸಹಾಯಕ್ಕೂ ಕಾಯದೆ, ತಕ್ಷಣ ಕಾರ್ಯಪ್ರವೃತ್ತಳಾಗಿ ಆಟೋವನ್ನು ಎತ್ತಿ ಮಹಿಳೆಯ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಬಾಲಕಿಯ ಸಮಯಪ್ರಜ್ಞೆ, ಧೈರ್ಯ ಶ್ಲಾಘನೀಯ. ಇತ್ತೀಚಿನ ದಿನಗಳಲ್ಲಿ ಅಪಘಾತ ಸಂಭವಿಸಿದ ಸ್ಥಳಗಳಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಬೇಕಿದ್ದ ಜನರು ಸುತ್ತಲೂ ನಿಂತು ಮೊಬೈಲ್ ಮೂಲಕ ವಿಡಿಯೋ ಮಾಡುವುದನ್ನು ಹಲವು ಬಾರಿ ಮಾಧ್ಯಮಗಳಲ್ಲಿ ಕಂಡಿದ್ದೆ, ಇದು ಭವಿಷ್ಯದ ದಿನಗಳ ಬಗ್ಗೆ ನನ್ನಲ್ಲಿ ಆತಂಕವನ್ನೂ ಮೂಡಿಸಿತ್ತು. ಈ ಪುಟ್ಟ ಬಾಲಕಿಯ ಕಾರ್ಯ ಇಡೀ ಸಮಾಜಕ್ಕೊಂದು ಸಂದೇಶ ರವಾನಿಸಿದಂತಿದೆ. ಅಪಘಾತ, ಬೆಂಕಿ ಅನಾಹುತ, ಹೃದಯಾಘಾತ ಇಂತಹ ತುರ್ತು ಸಂದರ್ಭದಲ್ಲಿ ಸಂತ್ರಸ್ತರ ಪಾಲಿಗೆ ಪ್ರತಿ ಸೆಕೆಂಡ್ ಕೂಡ ಅಮೂಲ್ಯ. ಈ ವೇಳೆ ಮಾನವೀಯತೆ ಮರೆಯದಿರಿ’ ಎಂದು ಸಿಎಂ ಬರೆದುಕೊಂಡಿದ್ದಾರೆ.
ದ.ಕ.ಜಿಲ್ಲೆಯ ಕಿನ್ನಿಗೋಳಿ ಉಲ್ಲಂಜೆಯ ರಾಮನಗರ 2ನೇ ಅಡ್ಡರಸ್ತೆ ಬಳಿ ಸೆ.6ರಂದು ರಸ್ತೆ ದಾಟುತ್ತಿದ್ದ ರಾಜರತ್ನಾಪುರ ನಿವಾಸಿ ಚೇತನಾ(35) ಎಂಬವರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ರಿಕ್ಷಾ ನಿಯಂತ್ರಣ ತಪ್ಪಿ ಅವರ ಮೇಲೆಯೇ ಉರುಳಿಬಿದ್ದಿತ್ತು. ಇದೇ ವೇಳೆ ಅಲ್ಲೇ ನಡೆದುಕೊಂಡು ಬರುತ್ತಿದ್ದ ಅವರ ಪುತ್ರಿ ವೈಭವಿ ತಕ್ಷಣವೇ ತಾಯಿಯ ರಕ್ಷಣೆ ಧಾವಿಸಿದ್ದರು. ಆಟೋದಲ್ಲಿದ್ದವರು ಎದ್ದೇಳುತ್ತಿದ್ದಾಗ ಆಟೋವನ್ನು ಮೇಲೆಕ್ಕತ್ತಲು ಬಾಲಕಿ ನೆರವಾಗಿದ್ದಲ್ಲದೆ, ಗಾಯಾಳುವಿಗೂ ನೆರವಾಗಿದ್ದರು. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸದ್ಯ ಚೇತನಾ ಅವರು ಸುರತ್ಕಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ಷಣೆಯಲ್ಲಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಬಾಲಕಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು.