ವಾಶಿಂಗ್ಟನ್: ಬಿಲಿಯನೇರ್ ಟೆಕ್ ಉದ್ಯಮಿ ಎಲೋನ್ ಮಸ್ಕ್ ಶನಿವಾರ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಕಾಣಿಸಿಕೊಂಡಿದ್ದು, ಮುಂಬರುವ ಅಧ್ಯಕ್ಷೀಯ ಚುನಾವಣೆಯ ಬಗ್ಗೆ ಮಾತನಾಡಿದ್ದಾರೆ. ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಪ್ರಜಾಪ್ರಭುತ್ವವನ್ನು ಕಾಪಾಡಬಲ್ಲ ಏಕೈಕ ಅಭ್ಯರ್ಥಿಯಾಗಿದ್ದಾರೆ ಎಂದು ಅವರು ತೀಕ್ಷ್ಣವಾಗಿ ಪ್ರತಿಪಾದಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ ಅನ್ನು ಖರೀದಿಸಿರುವ, ಸ್ಪೇಸ್ಎಕ್ಸ್ ಮತ್ತು ಟೆಸ್ಲಾ ಸಿಇಒ ಆಗಿರುವ ಮಸ್ಕ್ ಪೆನ್ಸಿಲ್ವೇನಿಯಾದ ಬಟ್ಲರ್ನಲ್ಲಿ ಟ್ರಂಪ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಇದೇ ಪೆನ್ಸಿಲ್ವೇನಿಯಾದಲ್ಲಿ ಜುಲೈನಲ್ಲಿ ಮಾಜಿ ಅಧ್ಯಕ್ಷ ಟ್ರಂಪ್ ಅವರನ್ನು ಕೊಲ್ಲುವ ಯತ್ನ ಮಾಡಲಾಗಿತ್ತು ಹಾಗೂ ಅವರು ಅದರಲ್ಲಿ ಪಾರಾಗಿದ್ದರು ಎಂಬುದು ಗಮನಾರ್ಹ.
ಟ್ರಂಪ್ ಗೆಲ್ಲದಿದ್ದರೆ ಇದು ಅಮೆರಿಕದಲ್ಲಿ ಕೊನೆಯ ಚುನಾವಣೆಯಾಗಲಿದೆ ಎಂದು ಮಸ್ಕ್ ಎಚ್ಚರಿಸಿದರು. ಟ್ರಂಪ್ ಅವರ ಪ್ರಚಾರದ “ಮೇಕ್ ಅಮೆರಿಕ ಗ್ರೇಟ್ ಎಗೇನ್” ಎಂಬ ಘೋಷಣೆಯನ್ನು ಹೊಂದಿರುವ ಕಪ್ಪು ಟೋಪಿಯನ್ನು ಮಸ್ಕ್ ಈ ಸಂದರ್ಭದಲ್ಲಿ ಧರಿಸಿದ್ದು ಗಮನ ಸೆಳೆಯುವಂತಿತ್ತು.
“ನಾನು ಕೇವಲ MAGA ಅಲ್ಲ, ನಾನೊಬ್ಬ ಡಾರ್ಕ್ MAGA” ಎಂದು ಅವರು ಹೇಳಿದರು. ಮೇಕ್ ಅಮೆರಿಕ ಗ್ರೇಟ್ ಎಗೇನ್ ಎಂಬುದರ ಸಂಕ್ಷಿಪ್ತ ರೂಪ MAGA ಆಗಿದೆ.
ಮಸ್ಕ್ ಇದೇ ಮೊದಲ ಬಾರಿಗೆ ಟ್ರಂಪ್ ಅವರ ಟ್ರೇಡ್ ಮಾರ್ಕ್ ಶೈಲಿಯ ರ್ಯಾಲಿಯಲ್ಲಿ ಭಾಗಿಯಾಗಿದ್ದಾರೆ ಮತ್ತು ಈ ಮೂಲಕ ತೀವ್ರ ಪೈಪೋಟಿಯ ಅಧ್ಯಕ್ಷೀಯ ಚುನಾವಣೆಯ ಅಂತಿಮ ಹಂತದಲ್ಲಿ ಇಬ್ಬರ ನಡುವೆ ಬೆಳೆಯುತ್ತಿರುವ ಗೆಳೆತನವನ್ನು ಪ್ರದರ್ಶಿಸಿದ್ದಾರೆ. ಮಸ್ಕ್ ರಿಪಬ್ಲಿಕನ್ ಅಭ್ಯರ್ಥಿ ಟ್ರಂಪ್ ಅವರ ಬೆಂಬಲಕ್ಕಾಗಿ ಸೂಪರ್ ಪಿಎಸಿಯನ್ನು ರಚಿಸಿದ್ದಾರೆ. ಪ್ರಚಾರದ ಕೊನೆಯ ತಿಂಗಳುಗಳಲ್ಲಿ ಮತಗಳನ್ನು ಸೆಳೆಯಲು ಚುನಾವಣಾ ಪ್ರಚಾರಕ್ಕಾಗಿ ರಿಪಬ್ಲಿಕನ್ ಪಕ್ಷವು ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಿದೆ.