ಕ್ಲೀಮ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿ, ಹೊಂಬಾಳೆ ಫಿಲಮ್ಸ್ ಪ್ರೆಸೆಂಟ್ ಮಾಡುತ್ತಿರುವ ‘ಮಹಾವತಾರ ನರಸಿಂಹ’ ಸಿನಿಮಾ ಇದೇ ಶುಕ್ರವಾರ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ. ಅನಿಮೇಷನ್ ಸಿನಿಮಾ ಇದಾಗಿದ್ದು, ನರಸಿಂಹನ ಅವತಾರದ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಟ್ರೈಲರ್ ನಿಂದ ಸಿನಿಮಾದ ಬಗ್ಗೆ ನಿರೀಕ್ಷೆಗಳು ಮೂಡಿವೆ. ಇದೀಗ ದೊಡ್ಡ ಆಟಿಕೆ ಸಂಸ್ಥೆಯೊಂದು ಸಿನಿಮಾದ ಹಕ್ಕುಗಳನ್ನು ಖರೀದಿ ಮಾಡಲು ಮುಂದಾಗಿದೆ.

ಅನಿಮೇಷನ್ ಅಥವಾ ಇನ್ಯಾವುದೇ ಸಿನಿಮಾಗಳು ಭಾರಿ ದೊಡ್ಡ ಯಶಸ್ಸಾದರೆ ಆ ಸಿನಿಮಾಗಳ ಪಾತ್ರಗಳ ಮಾದರಿಯಲ್ಲಿಯೇ ಆಟಿಕೆಗಳನ್ನು ಮಾಡಿ ಮಾರುಕಟ್ಟೆಗೆ ತುರಲಾಗುತ್ತದೆ. ಇದಕ್ಕೆ ಭಾರಿ ಬೇಡಿಕೆ ಇದೆ. ಸ್ಪೈಡರ್ಮ್ಯಾನ್, ಐರನ್ ಮ್ಯಾನ್ ಹೀಗೆ ಅನೇಕ ಪಾತ್ರಗಳ ಬೊಂಬೆಗಳನ್ನು ಮಾಡಿ ಮಾರಾಟ ಮಾಡಲಾಗುತ್ತದೆ. ಮಾತ್ರವಲ್ಲದೆ ಆ ಪಾತ್ರಗಳನ್ನು ಇರಿಸಿಕೊಂಡು ವಿಡಿಯೋ ಗೇಮ್ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇದಕ್ಕೆ ಸಿನಿಮಾ ನಿರ್ಮಾಣ ಸಂಸ್ಥೆಗಳ ಅನುಮತಿ ಕಡ್ಡಾಯ. ಇದೀಗ ದೊಡ್ಡ ಆಟಿಕೆ ಉತ್ಪಾದನಾ ಸಂಸ್ಥೆಯೊಂದು ‘ಮಹಾವತಾರ ನರಸಿಂಹ’ ಸಿನಿಮಾದ ಹಕ್ಕುಗಳ ಖರೀದಿಗೆ ಮುಂದಾಗಿದ್ದು, ಪಾತ್ರಗಳನ್ನು ಇರಿಸಿಕೊಂಡು ಗೇಮ್ಗಳನ್ನು ನಿರ್ಮಾಣ ಮಾಡುವ ಯೋಜನೆ ಇದ್ದಂತಿದೆ.
‘ಮಹಾವತಾರ ನರಸಿಂಹ’ ಸಿನಿಮಾದ ಹಕ್ಕು ಖರೀದಿಗೆ ಮುಂದಾಗಿರುವ ಆ ಆಟಿಕೆ ಸಂಸ್ಥೆ ಯಾವುದು ಎಂಬ ಗುಟ್ಟು ಇನ್ನೂ ರಟ್ಟಾಗಿಲ್ಲ. ಆದರೆ ಸಿನಿಮಾ ಬಿಡುಗಡೆಗೆ ಮುಂಚೆಯೇ ಹೀಗೊಂದು ಆಫರ್ ಬಂದಿರುವುದು ನಿರ್ಮಾಣ ಸಂಸ್ಥೆ ಹಾಗೂ ಸಿನಿಮಾ ಪ್ರೆಸೆಂಟ್ ಮಾಡುತ್ತಿರುವ ಹೊಂಬಾಳೆ ಸಂಸ್ಥೆಯ ಪಾಲಿಗೆ ಒಳ್ಳೆಯ ಬೆಳವಣಿಗೆ.