ಚಿತ್ರರಂಗಕ್ಕೆ ಹೆಣ್ಣುಮಕ್ಕಳನ್ನು ಕಳಿಸೋಕೆ ಯೋಚಿಸುವಂತ ಪರಿಸ್ಥಿತಿಯಿದೆ

ಚಿತ್ರರಂಗಕ್ಕೆ ಹೆಣ್ಣುಮಕ್ಕಳನ್ನು ಕಳಿಸೋಕೆ ಯೋಚಿಸುವಂತ ಪರಿಸ್ಥಿತಿಯಿದೆ

ಬೆಂಗಳೂರು: ಕೇರಳದಲ್ಲಿ ಸಿನಿಮಾ ಕ್ಷೇತ್ರದ ಹೆಣ್ಣು ಮಕ್ಕಳ ಸುರಕ್ಷಿತತೆ ಬಗ್ಗೆ ದೇಶಾದ್ಯಂತ ಮಾತುಗಳು ಪ್ರಾರಂಭವಾದ ಬೆನ್ನಲ್ಲೇ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರನ್ನು ಕಾಪಾಡೋ ದೃಷ್ಟಿಯಲ್ಲಿ ಕಮಿಟಿ ರಚನೆ ಬಗ್ಗೆ ಯೋಚಿಸಲಿದ್ದೇವೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ತಿಳಿಸಿದರು.

ಇತ್ತೀಚೆಗೆ ‘ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ’ (ಫೈರ್) ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ನಟಿಯರ ಸುರಕ್ಷತೆ ಬಗ್ಗೆ ತಿಳಿದುಕೊಳ್ಳಲು ಕಮಿಟಿಯೊಂದರ ರಚನೆಗೆ ಮನವಿ ಪತ್ರ ಸಲ್ಲಿಸಿತ್ತು.

ಈ ಬೆನ್ನಲ್ಲೇ ಇಂದು ಫಿಲ್ಮ್ ಚೇಂಬರ್ನಲ್ಲಿ ಮಹತ್ವದ ಸಭೆ ನಡೆದಿದೆ. ಮೀಟಿಂಗ್ ಬಳಿಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

ಚಿತ್ರರಂಗ ಪ್ರವೇಶಿಸಲು ಪೋಷಕರ ಮುಂದಾಳತ್ವ ಬೇಕು. ಆಯೋಗವೂ ಅದನ್ನೇ ಯೋಚಿಸುತ್ತಿದೆ. ಒಂದು ಕಮಿಟಿ ಆಗಬೇಕೆಂಬ ಮನವಿ ಇದೆ. ಇಂದಿನ ಸಭೆಗೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ನಟಿಯರು ಬಂದಿದ್ದರು. ಶೂಟಿಂಗ್ ಹಾಗೂ ಇತರೆ ಕೆಲಸಗಳಿಂದಾಗಿ ಅವರು ಬಂದಿಲ್ಲ ಅನಿಸುತ್ತದೆ.

ಕಮಿಟಿಯಲ್ಲಿ ಯಾರೆಲ್ಲಾ ಇರಬೇಕೆಂಬುದರ ಬಗ್ಗೆ ಕಾನೂನು ಇದೆ. ಎಲ್ಲರನ್ನೂ ಮುಂದಿನ ಸಭೆಗೆ ಕರೆಯಬೇಕು. ಕಮಿಟಿಯಲ್ಲಿ ಹೆಚ್ಚು ಹೆಣ್ಣು ಮಕ್ಕಳ ಸಂಖ್ಯೆ ಇರಬೇಕು, ಸಿನಿಮಾದಲ್ಲಿ ನಟಿಸುವ ಹೆಣ್ಣುಮಕ್ಕಳಿಗೆ ಯಾವ ಸೌಲಭ್ಯ ಕೊಡಬೇಕೆಂಬುದರ ಬಗ್ಗೆಯೂ ಚರ್ಚೆ ಆಗಬೇಕಿದೆ ಎಂದರು.

ನಾನು ನನಗಾಗಿರೋ ಲೈಂಗಿಕ ಕಿರುಕುಳವನ್ನು ಹೇಳೋಕೆ ಆಗಲ್ಲ. ಹೇಳಿದ್ರೆ ಅವಳು ಹಂಗೆ, ಇವಳು ಹಿಂಗೆ ಅಂತಾ ಮಾತನಾಡುತ್ತಾರೆ. ವಾಣಿಜ್ಯ ಮಂಡಳಿ ಸಿನಿಮಾದವರಿಗೆ ತಾಯಿ ಸಂಸ್ಥೆ. ಕಮಿಟಿ ರಚನೆಯಾಗಲಿ ಎಂದು ತಿಳಿಸಿದರು.

ದೌರ್ಜನ್ಯ ಅಂತಾ ಬಂದಾಗ ಲೈಂಗಿಕವಾಗಿಯೂ ಇರಬಹುದು, ವರ್ಬಲ್ ಆಗಿಯೂ ಇರಬಹುದು. ಈವರೆಗೂ ಕನ್ನಡ ಚಿತ್ರರಂಗದಲ್ಲಿ ಇಂಥದ್ದೊಂದು ಕಮಿಟಿ ಆಗಿಲ್ಲ. ಈ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಇದೆ. ಸಿನಿಮಾರಂಗಕ್ಕೆ ಹೆಣ್ಣು ಮಕ್ಕಳನ್ನು ಈಸಿಯಾಗಿ ಕಳಿಸುವಂತಹ ವಾತಾವರಣ ಇರಬೇಕು. ಆದ್ರೆ ಚಿತ್ರರಂಗಕ್ಕೆ ಹೆಣ್ಣು ಮಕ್ಕಳನ್ನು ಕಳಿಸೋಕೆ ಕುಟುಂಬಸ್ಥರು ಹಿಂದೆ ಮುಂದೆ ನೋಡ್ತಾರೆ. ಆಯೋಗ ಈ ಬಗ್ಗೆ ಯೋಚಿಸಿದೆ. ಕಮಿಟಿ ರಚನೆ ಮಾಡೋಣ ಅಂತಾ ಹೇಳಿದ್ದೇನೆ. ಮುಂದಿನ ಸಭೆಯಲ್ಲಿ ಹೆಚ್ಚು ಮಹಿಳೆಯರು ಬಂದ್ರೆ ಸೂಕ್ತ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ತಿಳಿಸಿದರು.

Leave a Reply

Your email address will not be published. Required fields are marked *