ತಿರುವನಂತಪುರಂ || ಕೇರಳ ರಾಜ್ಯಪಾಲರಾಗಿ ಗೋವಾ ಮೂಲದ ರಾಜೇಂದ್ರ ಅರ್ಲೇಕರ್ ಅಧಿಕಾರ ಸ್ವೀಕಾರ

ತಿರುವನಂತಪುರಂ || ಕೇರಳ ರಾಜ್ಯಪಾಲರಾಗಿ ಗೋವಾ ಮೂಲದ ರಾಜೇಂದ್ರ ಅರ್ಲೇಕರ್ ಅಧಿಕಾರ ಸ್ವೀಕಾರ

ತಿರುವನಂತಪುರಂ: ಕೇರಳದ ನೂತನ ರಾಜ್ಯಪಾಲರಾಗಿ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಂಪುಟ ಸಚಿವರು, ವಿರೋಧ ಪಕ್ಷದ ನಾಯಕರು, ಕಾಂಗ್ರೆಸ್ ಸಂಸದ ಶಶಿ ತರೂರ್, ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ್ ಬೋಸ್ ಮತ್ತು ಇತರ ಗಣ್ಯರು ಪ್ರಮಾಣ ವಚನ ಸಮಾರಂಭದಲ್ಲಿ ಉಪಸ್ಥಿತರಿದ್ದರು. ರಾಜೇಂದ್ರ ಅರ್ಲೇಕರ್ ಈ ಹಿಂದೆ ಬಿಹಾರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

ಕೇರಳದ ಸಾಂಪ್ರದಾಯಿಕ ಉಡುಪನ್ನು ಧರಿಸಿದ ಅರ್ಲೇಕರ್ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅರ್ಲೇಕರ್ ಕೇರಳದ 23ನೇ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ರಾಜಭವನ ತಿಳಿಸಿದೆ.

ಇತ್ತೀಚಿನವರೆಗೂ ಬಿಹಾರದ ರಾಜ್ಯಪಾಲರಾಗಿದ್ದ ಅರ್ಲೇಕರ್ ಅವರು ಆರಿಫ್ ಮೊಹಮ್ಮದ್ ಖಾನ್ ಅವರ ಸ್ಥಾನವನ್ನು ತುಂಬಲಿದ್ದಾರೆ. ರಾಜ್ಯದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡ ಸರ್ಕಾರದೊಂದಿಗೆ ಆರಿಫ್ ಮೊಹಮ್ಮದ್ ಖಾನ್ ಹೊಂದಿದ್ದ ಪ್ರಕ್ಷುಬ್ಧ ಸಂಬಂಧದ ಹಿನ್ನೆಲೆಯಲ್ಲಿ ಹೊಸ ರಾಜ್ಯಪಾಲರ ಕಾರ್ಯವೈಖರಿ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಆರಿಫ್ ಮೊಹಮ್ಮದ್ ಖಾನ್ ಅವರು ಅರ್ಲೇಕರ್ ಅವರ ಜಾಗದಲ್ಲಿ ಬಿಹಾರ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಅರ್ಲೇಕರ್ ಹಿನ್ನೆಲೆ: ವಾಣಿಜ್ಯ ಪದವೀಧರರಾಗಿರುವ 70 ವರ್ಷದ ಅರ್ಲೇಕರ್ ಗೋವಾ ಮೂಲದವರು. ಬಿಹಾರದ ರಾಜ್ಯಪಾಲರಾಗಿ ನೇಮಕಗೊಳ್ಳುವ ಮೊದಲು ಅವರು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿದ್ದರು. ಚಿಕ್ಕ ವಯಸ್ಸಿನಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ)ಗಳ ಸದಸ್ಯರಾಗಿ ಕೆಲಸ ಮಾಡಿರುವ ಅರ್ಲೇಕರ್ ಮಾಜಿ ಸಚಿವರೂ ಹೌದು. ಅವರು ಗೋವಾ ವಿಧಾನಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಎರಡು ಬಾರಿ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅರ್ಲೇಕರ್ 2012ರಿಂದ 2015ರವರೆಗೆ ಸ್ಪೀಕರ್ ಆಗಿದ್ದರು ಮತ್ತು 2015ರಿಂದ 2017ರವರೆಗೆ ಗೋವಾದ ಅರಣ್ಯ ಮತ್ತು ಪರಿಸರ ಮತ್ತು ಪಂಚಾಯತ್ ಸಚಿವರಾಗಿದ್ದರು.

ಅವರನ್ನು ಜುಲೈ 2021ರಲ್ಲಿ ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಮತ್ತು ಫೆಬ್ರವರಿ 2023ರಲ್ಲಿ ಬಿಹಾರದ ರಾಜ್ಯಪಾಲರಾಗಿ ನೇಮಿಸಲಾಗಿತ್ತು. ಅರ್ಲೇಕರ್ ಅವರು ಅನಘಾ ಅರ್ಲೇಕರ್ ಅವರನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದಕ್ಕೂ ಮುನ್ನ, ನಿರ್ಗಮಿತ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ತಮ್ಮ ಅಧಿಕಾರಾವಧಿ ಕೊನೆಗೊಂಡ ಹಿನ್ನೆಲೆಯಲ್ಲಿ ಕೇರಳದ ಜನರಿಗೆ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *