ತಾರಾಗಣದ ವಿಚಾರವಾಗಿ ಹೆಚ್ಚು ಸದ್ದು ಮಾಡುತ್ತಿರುವ ಬಹುಭಾಷಾ ಸಿನಿಮಾ ‘ಕಣ್ಣಪ್ಪ’. ಸ್ಟಾರ್ ಕಲಾವಿದರನ್ನೇ ಒಳಗೊಂಡಿರುವ ಚಿತ್ರ ಸದ್ಯ ಶೂಟಿಂಗ್ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೂ ಮಾಡುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ನೋಡುಗರ ಹುಬ್ಬೇರಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದಲ್ಲಿ ವಿಷ್ಣು ಮಂಚು ‘ಕಣ್ಣಪ್ಪ’ನಾಗಿ ಖದರ್ ತೋರಿಸಲಿದ್ದಾರೆ. ನಟಿ ಮಧುಬಾಲ ಅವರ ವಿಶೇಷ ಲುಕ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಮಧುಬಾಲಾ ‘ಕಣ್ಣಪ್ಪ’ದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವುದು ವಿಚಾರ ಸಿನಿ ಪ್ರೇಮಿಗಳಿಗೆ ಗೊತ್ತಿರವಂಥದ್ದೇ. ಆದರೆ, ಪಾತ್ರ ಮತ್ತು ನೋಟ ಹೇಗಿರಲಿದೆ ಎಂಬುದರ ಬಗ್ಗೆ ಚಿತ್ರತಂಡ ಈವರೆಗೆ ಸುಳಿವು ನೀಡಿರಲಿಲ್ಲ. ಇದೀಗ ಮಧುಬಾಲ ಪಾತ್ರ ಪರಿಚಯದ ಫಸ್ಟ್ ಲುಕ್ ರಿಲೀಸ್ ಆಗಿದೆ. ಚಿತ್ರದಲ್ಲಿ ಪನ್ನಗ ಹೆಸರಿನ ಖಡಕ್ ಪಾತ್ರದಲ್ಲಿ ನಟಿ ಮಿಂಚು ಹರಿಸಲಿದ್ದಾರೆ. ಕೈಯಲ್ಲಿ ಕತ್ತಿ ಹಿಡಿದು ಶತ್ರುಗಳ ಸಂಹಾರಕ್ಕೆ ನಿಂತಂತಿದೆ ಅವರ ಮೊದಲ ನೋಟ!.
ಬೇಡ ಕುಲದ ನಾಯಕಿಯಾಗಿ ಮಧು ಪಾತ್ರ ಸಾಗಲಿದೆ. ಆಕೆ ತಮ್ಮ ಸಮುದಾಯದ ನಾಯಕಿ ಮಾತ್ರವಲ್ಲ, ಹೋರಾಟದಲ್ಲಿಯೂ ದಿಟ್ಟ ಧೀರೆ. ನಾವಂದುಕೊಂಡಂತೇ ಅವರ ಪಾತ್ರ ಮೂಡಿಬಂದಿದ್ದು, ನೋಡುಗರಿಗೆ ಇಷ್ಟವಾಗಲಿದೆ ಎಂಬುದು ಚಿತ್ರತಂಡ ಭರವಸೆಯ ಮಾತುಗಳು. ಈಗಾಗಲೇ ಟೀಸರ್ ಜಾಗತಿಕ ಮಟ್ಟದಲ್ಲೂ ಕ್ರೇಜ್ ಸೃಷ್ಟಿಸಿದೆ. ಇತ್ತೀಚಿನ ಕಾನ್ ಸಿನಿಮೋತ್ಸವದಲ್ಲಿ ಟೀಸರ್ ಬಿಡುಗಡೆಯಾಗಿದ್ದು ವಿಶೇಷ.
ಕಣ್ಣಪ್ಪ ಬರೀ ಇತಿಹಾಸವಲ್ಲ, ಇದು ಎರಡನೇ ಶತಮಾನದ ಚೋಳರ ಕಾಲದ ಕಥೆ ಎಂದು ಶಂಕರಾಚಾರ್ಯರು ಹೇಳಿದ್ದರು. 14ನೇ ಶತಮಾನದಲ್ಲಿ ಕವಿ ಧೂರ್ಜಟಿ ಈ ಬಗ್ಗೆ ಬರೆದಿದ್ದಾರೆ. 18ನೇ ಶತಮಾನದಲ್ಲಿ ಬ್ರಿಟಿಷರೂ ಇಂಗ್ಲಿಷ್ನಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ಇವೆಲ್ಲವನ್ನೂ ಅಧ್ಯಯನ ಮಾಡಿ ಸಿನಿಮಾ ಮಾಡಲಾಗಿದೆ ಎಂದು ಟೀಸರ್ ಬಿಡುಗಡೆ ಸಂದರ್ಭದಲ್ಲಿ ವಿಷ್ಣು ಮಂಚು ಹೇಳಿದ್ದರು. ಹಾಗಾಗಿಯೇ ಚಿತ್ರದ ಸುತ್ತಲಿನ ಕುತೂಹಲ ದುಪ್ಪಟ್ಟಾಗಿದೆ.
ಮೋಹನ್ ಬಾಬು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್, ಶರತ್ಕುಮಾರ್, ಮಧುಬಾಲ, ಕಾಜಲ್ ಅಗರ್ವಾಲ್ ಸೇರಿದಂತೆ ಬಹು ತಾರಾಗಣವೇ ಚಿತ್ರದಲ್ಲಿದೆ. ಮಗನ ಚಿತ್ರವನ್ನು ಸ್ವತಃ ತಂದೆ ಮೋಹನ್ ಬಾಬು ನಿರ್ಮಿಸುತ್ತಿದ್ದಾರೆ. ಮುಖೇಶ್ ಕುಮಾರ್ ಸಿಂಗ್ ನಿರ್ದೇಶನವಿದೆ. ತೆಲುಗು ಮಾತ್ರವಲ್ಲದೇ ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿ ಹಲವು ಭಾರತೀಯ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಡಿಸೆಂಬರ್ನಲ್ಲಿ ಕಣ್ಣಪ್ಪ ವಿಶ್ವದಾದ್ಯಂತ ಬಿಡುಗಡೆಗೆ ಯೋಜನೆ ನಡೆಯುತ್ತಿದೆ.
ಎವಿಎ ಎಂಟರ್ಟೈನ್ಮೆಂಟ್ಸ್ ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ ಬ್ಯಾನರ್ಗಳಲ್ಲಿ ಬಹುಕೋಟಿ ಬಜೆಟ್ನಲ್ಲಿ ದೊಡ್ಡ ಕ್ಯಾನ್ವಾಸ್ನೊಂದಿಗೆ ಮೂಡಿಬರುತ್ತಿರುವ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದ್ದು, ವಿಎಫ್ಎಕ್ಸ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.