ಭಾರತ: ಇಡೀ ದೇಶವೇ ಬೆಚ್ಚಿ ಬೀಳುವ ಘಟನೆ ದೇಶದ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಪುಲ್ವಾಮಾ ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ನಡೆದಿರುವ ಭಯಾನಕ ಭಯೋತ್ಪಾದಕ ಉಗ್ರರ ದಾಳಿ ಇದಾಗಿದೆ. ಈ ಭಯಾನಕ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಕನ್ನಡಿಗರು ಹಾಗೂ ಇಬ್ಬರು ವಿದೇಶಿಗರು ಸೇರಿದಂತೆ ಒಟ್ಟು 26 ಜನ ಮೃತಪಟ್ಟಿದ್ದಾರೆ. ಇನ್ನು ಈ ಹೇಯ ಕೃತ್ಯವನ್ನು ಲಷ್ಕರ್ – ಎ- ತೈಬಾದೊಂದಿಗೆ ಸಂಪರ್ಕವನ್ನು ಹೊಂದಿರುವ ದಿ ರೆಸಿಸ್ಟನ್ಸ್ ಫ್ರಂಟ್ ಮಾಡಿರುವುದಾಗಿ ಹೊಣೆ ಹೊತ್ತುಕೊಂಡಿದೆ. ಇದರ ಬೆನ್ನಲ್ಲೇ ಪಾಪಿ ಪಾಕಿಸ್ತಾನದ ಬಣ್ಣ ಬಯಲಾಗುತ್ತಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದಿರುವ ಈ ದಾಳಿಯು ಭಾರೀ ಭೀಕರವಾಗಿತ್ತು. ಇದೀಗ ಪ್ರಾಥಮಿಕ ವರದಿಯ ಪ್ರಕಾರ ಈ ದಾಳಿಯಲ್ಲಿ ಇನ್ನಷ್ಟು ಜನರನ್ನು ಹತ್ಯೆ ಮಾಡುವ ಸಂಚು ರೂಪಿಸಲಾಗಿತ್ತು ಎನ್ನುವ ವಿಷಯಗಳು ಬಹಿರಂಗವಾಗಿವೆ. ಇನ್ನಷ್ಟು ಜನರ ಮೇಲೆ ದಾಳಿ ಮಾಡುವುದು ಸಾವು ನೋವಿನ ಸಂಖ್ಯೆಯನ್ನು ಹೆಚ್ಚಳ ಮಾಡುವುದು ಉಗ್ರರ ಉದ್ದೇಶವಾಗಿತ್ತು ಎಂದು ಹೇಳಲಾಗಿದೆ. ಇದೀಗ ಈ ಉಗ್ರರ ದಾಳಿಯನ್ನು ಮಾಡಿದ್ದು ಯಾರು ಎನ್ನುವ ಬಗ್ಗೆ ಭಾರತೀಯ ಸೇನೆಯು ಕಾರ್ಯಾಚರಣೆಗೆ ಇಳಿದಿದ್ದು. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಮೋಸ್ಟ್ವಾಂಟೆಡ್ ಉಗ್ರರು ಯಾರು ಹಾಗೂ ಪಾಕಿಸ್ತಾನದೊಂದಿಗೆ ಅವರ ಸಂಬಂಧ ಏನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ದ ಉಗ್ರರ ದಾಳಿಯು ಕಣಿವೆ ರಾಜ್ಯದಲ್ಲಿ ಇತ್ತೀಚಿನ ವರ್ಷದಲ್ಲಿ ನಡೆದಿರುವ ಭಯಾನಕ ಉಗ್ರರ ದಾಳಿಗಳಲ್ಲಿ ಒಂದಾಗಿದೆ. “ನೀವು ಯಾವ ಧರ್ಮದವರು” ಎಂದು ಕೇಳಿರುವ ಉಗ್ರರು ಹಿಂದೂಗಳನ್ನು ಗುರಿಯಾಗಿಸಿಕೊಂಡೇ ದಾಳಿ ಮಾಡಿದ್ದಾರೆ. ಸಾಲದಕ್ಕೆ ಫ್ಯಾಂಟ್ಗಳನ್ನು ಬಿಚ್ಚಿಸಿ ಹಿಂದೂ ಧರ್ಮೀಯರನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ ಎನ್ನುವುದು ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಮಾಸ್ಟರ್ ಮೈಂಡ್ ಸೈಫುಲ್ಲಾ ಖಾಲಿದ್! ಕಾಶ್ಮೀರದ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಸೈಫುಲ್ಲಾ ಖಾಲಿದ್ ಎಂದು ಆತನ ಹುಡುಕಾಟಕ್ಕೆ ಬೃಹತ್ ಮಿಲಿಟರಿ ಕಾರ್ಯಾಚರಣೆ ನಡೆದಿದೆ. ಈ ದಾಳಿಯಲ್ಲಿ ಎಲ್ಇಟಿಯ ಕಮಾಂಡರ್ ಸಹ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇಬ್ಬರು ಲಷ್ಕರ್ ಕಮಾಂಡರ್ಗಳು ಸಹ ಇದ್ದರು ಎಂದು ಹೇಳಲಾಗಿದೆ. ಸೈಫುಲ್ಲಾ ಖಾಲಿದ್ ಈ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದೆ.
ಹೊಸ ಭಯೋತ್ಪಾದಕ ಸಂಘಟನೆ: ದೇಶದಲ್ಲಿ ಮಹತ್ವದ ಬೆಳವಣಿಗೆ ಹಾಗೂ ಹೊಸ ಇತಿಹಾಸ ಸೃಷ್ಟಿಯಾಗಿರುವುದರಲ್ಲಿ ಕೇಂದ್ರ ಬಿಜೆಪಿ ಸರ್ಕಾರವು 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯನ್ನು ರದ್ದುಪಡಿಸಿದ್ದು ಸಹ ಒಂದಾಗಿದೆ. ಇದಾದ ಮೇಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಭಯೋತ್ಪಾದಕ ಸಂಘಟನೆ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಸೃಷ್ಟಿಯಾಗಿತ್ತು. ಲಷ್ಕರ್-ಎ-ತೈಬಾ (ಎಲ್ಇಟಿ)ಯ ಅಂಗ ಸಂಸ್ಥೆ ಇದಾಗಿದೆ. ಕೇಂದ್ರ ಸರ್ಕಾರವು ಟಿಆರ್ಎಫ್ ಅನ್ನು ಪಾಕಿಸ್ತಾನ ಮೂಲದ ಎಲ್ಇಟಿಗೆ ‘ಪ್ರಾಕ್ಸಿ’ ಫ್ರಂಟ್ ಎಂದು ಹೇಳುತ್ತದೆ. ಕೇಂದ್ರ ಸರ್ಕಾರವು 2023ರಲ್ಲಿ TRF ಅನ್ನು ನಿಷೇಧಿಸಿದೆ. ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಕಾಶ್ಮೀರಿ ಪಂಡಿತರು, ವಲಸೆ ಕಾರ್ಮಿಕರು ಹಾಗೂ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಸೇರಿದಂತೆ ಇಲ್ಲಿನ ಸಾರ್ವಜನಿಕರ ಮೇಲೆ ನಡೆದಿರುವ ದಾಳಿಗಳಲ್ಲಿ TRF ಪಾತ್ರ ಇದೆ ಎಂದು ಹೇಳಲಾಗಿದೆ.
ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯೊಂದಿಗೆ ಈ ಸಂಘಟನೆಯು ಸಂಪರ್ಕದಲ್ಲಿ ಇತ್ತು ಎಂದು ಹೇಳಲಾಗಿದೆ. ಭಯೋತ್ಪಾದಕ ಕೃತ್ಯ ನಡೆಸುವುದಕ್ಕೆ ಪಾಕಿಸ್ತಾನದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಿದ್ದ ಹಾಗೂ ಪಾಕ್ ಸೇನಾ ಅಧಿಕಾರಿಗಳೊಂದಿಗೂ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಇದೀಗ ಭಾರತ ಸರ್ಕಾರವು ಐ ಅಲರ್ಟ್ ಘೋಷಿಸಲಾಗಿದ್ದು, ಉಗ್ರರ ರೇಖಾಚಿತ್ರವನ್ನು ಬಿಡುಗಡೆ ಮಾಡಿದೆ. ಇಬ್ಬರು ಉಗ್ರರು ಮಟಾಷ್! ಇನ್ನು ಭಾರತೀಯ ಸೇನೆಯು ಈ ದಾಳಿಯ ಬೆನ್ನಲ್ಲೇ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ. ಇಲ್ಲಿನ ನಿಯಂತ್ರಣ ರೇಖೆಯ ಬಳಿ ಇಬ್ಬರು ಉಗ್ರರು ಒಳನುಸುಳುವುದನ್ನು ತಡೆಹಿಡಿಯಲಾಗಿದ್ದು. ಇಬ್ಬರು ಶಸ್ತ್ರಧಾರಿ ಉಗ್ರರಿಗೆ ಗುಂಡಿಕ್ಕಲಾಗಿದೆ.
ಕಾಶ್ಮೀರಿ ಭಯೋತ್ಪಾದಕರೂ ಭಾಗಿ! ಇನ್ನು ಈ ದಾಳಿಯಲ್ಲಿ ಪಾಕಿಸ್ತಾನಿ ಉಗ್ರರೊಂದಿಗೆ ಸ್ಥಳೀಯ ಕಾಶ್ಮೀರದ ಇಬ್ಬರು ಭಯೋತ್ಪಾದಕರೂ ಸಹ ಕೈ ಜೋಡಿಸಿದ್ದರು ಎನ್ನುವ ಭಯಾನಕ ಅಂಶ ವರದಿಯಾಗಿದೆ. ಆರು ಜನರಿದ್ದ ಉಗ್ರರ ತಂಡವು ಕೆಲವು ಸ್ಥಳೀಯರ ಸಹಕಾರದೊಂದಿಗೆ ದಾಳಿ ನಡೆಸುವುದಕ್ಕಿಂತಲೂ ಮುಂಚಿತವಾಗಿ ಇಲ್ಲಿನ ಜಾಗವನ್ನು ಪರಿಶೀಲನೆ ಮಾಡಿದ್ದರು ಎಂದು ಹೇಳಲಾಗಿದೆ. ಸೇನೆ ಪ್ರವೇಶ ತಡವಾಗುವ ಪ್ರದೇಶ ಆಯ್ಕೆ: ಇನ್ನು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದ ಬೈಸರನ್ ಅನ್ನೇ ಯಾಕೆ ಉಗ್ರರು ಆಯ್ಕೆ ಮಾಡಿಕೊಂಡರು ಎನ್ನುವುದಕ್ಕೂ ಇದೀಗ ಉತ್ತರ ಸಿಕ್ಕಿದೆ. ಇಲ್ಲಿ ಸೇನೆಯನ್ನು ಅಥವಾ ಭದ್ರತಾ ಸಿಬ್ಬಂದಿಯ ಸಂಖ್ಯೆ ವಿರಳವಾಗಿತ್ತು. ದಾಳಿ ನಡೆದ ಪ್ರದೇಶವು ಪಹಲ್ಗಾಮ್ನಿಂದ ಅಂದಾಜು 6.5 ಕಿ. ಮೀ ದೂರದಲ್ಲಿ ಇದೆ. ಇಲ್ಲಿಗೆ ಮಣ್ಣಿನ ಹಾದಿಯ ಮೂಲಕ ಕಾಲ್ನಡಿಗೆ ಅಥವಾ ಕುದುರೆ ಸವಾರಿಯ ಮೂಲಕ ಮಾತ್ರ ಪ್ರವೇಶಿಸಲು ಸಾಧ್ಯವಿದೆ ಎಂದು ಹೇಳಲಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಪ್ರಾರಂಭವಾದರೂ, ಸೇನೆ ಇಲ್ಲಿಗೆ ಬರುವುದಕ್ಕೆ ಸ್ವಲ್ಪ ಸಮಯ ಹಿಡಿಸುತ್ತದೆ ಅಥವಾ ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಇಲ್ಲಿ ದಾಳಿ ಮಾಡಲಾಗಿದೆ. ಇದರಲ್ಲಿ ಮತ್ತೊಂದು ಆಘಾತಕಾರಿ ಸಂಗತಿಯೆಂದರೆ ಉಗ್ರರು ಇಲ್ಲಿನ ದಾಳಿಯನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಾಡಿ ಕ್ಯಾಮೆರಾಗಳನ್ನು ನಿರ್ದಿಷ್ಟವಾಗಿ ಹೆಲ್ಮೆಟ್-ಮೌಂಟೆಡ್ ಕ್ಯಾಮೆರಾಗಳನ್ನು ಧರಿಸಿದ್ದರು. ಈ ಮೂಲಕ ಈ ದಾಳಿಯನ್ನು ವಿಕೃತವಾಗಿ ಸಂಭ್ರಮಿಸಿದ್ದಾರೆ. ಉಗ್ರರು ದಾಳಿಗೂ ಮುಂಚೆ ಪುರುಷ ಹಾಗೂ ಮಹಿಳೆಯರ ಗುಂಪುಗಳನ್ನು ವಿಂಗಡಿಸಿದ್ದಾರೆ. ನಾಲ್ಕು ಜನ ಉಗ್ರರು AK-47 ರೈಫಲ್ಗಳಿಂದ ಹತ್ತಿರದಿಂದಲೇ ಮನಬಂದಂತೆ ಗುಂಡುಗಳನ್ನು ಹಾರಿಸಿದರೆ, ಇನ್ನೂ ಕೆಲವರಿಗೆ ದೂರದಿಂದಲೇ ಗುಂಡು ಹಾರಿಸಲಾಗಿದೆ. ಮಹತ್ವದ ಸಮಯದಲ್ಲೇ ದಾಳಿ: ಇನ್ನು ದೇಶದಲ್ಲಿ ಪ್ರಮುಖ ಬೆಳವಣಿಗೆ ನಡೆಯುವ ಸಂದರ್ಭದಲ್ಲಿಯೇ ಈ ದಾಳಿಯನ್ನು ನಡೆಸಲಾಗಿದೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಪಹಲ್ಗಾಮ್ ಪ್ರದೇಶವೂ ಒಂದಾಗಿದೆ. ಇಲ್ಲಿಗೆ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ. ಇದೇ ಪ್ರದೇಶವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಅಲ್ಲದೇ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾಕ್ಕೆ ಪ್ರವಾಸ ಮಾಡಿದ್ದರು ಇಂತಹ ಪ್ರಮುಖ ಸಂದರ್ಭವನ್ನೇ ಉಗ್ರರು ದಾಳಿಗೆ ಆಯ್ಕೆ ಮಾಡಿಕೊಂಡಿದ್ದಾರೆ.