ರಮ್ಯಾಗೆ ಅಸಭ್ಯ ಮೆಸೇಜ್ ಮಾಡಿದವರಿಗೂ, ಮಾಡಿಸಿದವರಿಗೂ ಶಿಕ್ಷೆ ಆಗಬೇಕು: Rockline Venkatesh

ರಮ್ಯಾಗೆ ಅಸಭ್ಯ ಮೆಸೇಜ್ ಮಾಡಿದವರಿಗೂ, ಮಾಡಿಸಿದವರಿಗೂ ಶಿಕ್ಷೆ ಆಗಬೇಕು: Rockline Venkatesh

ನಟಿ ರಮ್ಯಾ ಅವರಿಗೆ ದರ್ಶನ್ ಅಭಿಮಾನಿಗಳು ಕೆಟ್ಟದಾಗಿ ಸಂದೇಶ ಕಳಿಸಿದ್ದರ ಬಗ್ಗೆ ಚಿತ್ರರಂಗದ ಹಲವು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾಮಾ ಹರೀಶ್ ಅವರು ಕಲಾವಿದರ ಸಂಘಕ್ಕೆ ಮನವಿ ಮಾಡಿದ್ದಾರೆ. ಮನವಿ ಸ್ವೀಕರಿಸಿದ ಬಳಿಕ ರಾಕ್ಲೈನ್ ವೆಂಕಟೇಶ್ ಅವರು ಮಾಧ್ಯಮಗಳ ಎದುರು ಮಾತನಾಡಿದರು. ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲವಾಗಿ ಕಮೆಂಟ್ ಮಾಡುವವರಿಗೆ ರಾಕ್ಲೈನ್ ವೆಂಕಟೇಶ್ ಅವರು ಎಚ್ಚರಿಕೆ ನೀಡಿದ್ದಾರೆ.

‘ರಮ್ಯಾ ವಿಷಯದಲ್ಲಿ ನಿಜವಾದ ಫ್ಯಾನ್ಸ್ ಪೇಜ್ಗಳಿಂದ ಮೆಸೇಜ್ ಬರುತ್ತಿದ್ದರೆ ಮಾಡಿದವರಿಗೂ, ಮಾಡಿಸುತ್ತಾ ಇರುವವರಿಗೂ ಶಿಕ್ಷೆ ಆಗಬೇಕು. ಅದರಲ್ಲಿ ಎರಡನೇ ಮಾತಿಲ್ಲ. ನಿಮ್ಮ ಮನೆಯಲ್ಲೂ ಹೆಣ್ಮಕ್ಕಳು ಇದ್ದಾರೆ. ನೀವು ಬೇರೆ ಹೆಣ್ಮಕ್ಕಳನ್ನು ಬೈಯ್ಯುವ ಬದಲು ಮೊದಲು ನಿಮ್ಮ ಮನೆಯಲ್ಲಿ ಇರುವ ಹೆಣ್ಮಕ್ಕಳನ್ನು ಕಾಪಾಡಿಕೊಳ್ಳಿ. ಅವರನ್ನು ಮೊದಲು ತೃಪ್ತಿಪಡಿಸಿ, ಸಂತೋಷವಾಗಿ ಇಟ್ಟುಕೊಳ್ಳಿ. ನಿಮ್ಮ ಬೈಗುಳದಲ್ಲಿ ಸಾಕಷ್ಟು ಅರ್ಥ ಇದೆ. ಅದು ನಿಮ್ಮ ಮನೆಯ ಹೆಣ್ಮಕ್ಕಳಿಗೂ ಅನ್ವಯಿಸುತ್ತದೆ’ ಎಂದು ರಾಕ್ಲೈನ್ ವೆಂಕಟೇಶ್ ಹೇಳಿದರು.

‘ನಾಳೆ ಯಾವ ಸ್ಟಾರ್ ನಟ ಕೂಡ ನಿಮ್ಮನ್ನು ಬಂದು ಕಾಪಾಡಲ್ಲ. ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ನನಗೆ ತುಂಬ ಜನ ಅಭಿಮಾನಿಗಳು ಈ ರೀತಿ ಬೈಯ್ದಿದ್ದಾರೆ. ನಾನು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಗಾಳಿಯಲ್ಲಿ ಗುಂಡು ಹೊಡೆಯುವವರನ್ನು ನಾನು ಕೇರ್ ಮಾಡಲ್ಲ. ಎದುರು ನಿಂತು ಮಾತನಾಡುವವರಿಗೆ ನಾನು ಗೌರವ ಕೊಡುತ್ತೇನೆ. ಅವನು ಕೆಟ್ಟದಾಗಿ ಬೈಯ್ದರೂ ಅವನಿಗೆ ಗೌರವ ಕೊಟ್ಟು ಏನಪ್ಪ ನಿನ್ನ ಸಮಸ್ಯೆ ಅಂತ ಕೇಳುತ್ತೇನೆ’ ಎಂದಿದ್ದಾರೆ ರಾಕ್ಲೈನ್ ವೆಂಕಟೇಶ್.

‘ಇಷ್ಟು ಜನ ಮಾತನಾಡುವವರಿಗೆ ಎದುರು ನಿಂತು ಮಾತನಾಡೋಕೆ ಹೇಳಿ. ಎಂಥ ಹೀರೋನೇ ಆಗಿರಲಿ. ಆ ಹೀರೋನ ಸಪೋರ್ಟ್ ಮಾಡಿಕೊಂಡು ನಿಲ್ಲುತ್ತೇವೆ ಎಂಬ ನಿಜವಾದ ಫ್ಯಾನ್ಸ್ ನೀವಾಗಿದ್ದರೆ ಮುಂದೆ ಬನ್ನಿ. ಈ ಕಾರಣಕ್ಕೋಸ್ಕರ ಪೋಸ್ಟ್ ಮಾಡಿದ್ದು ಅಂತ ಒಪ್ಪಿಕೊಳ್ಳಿ. ಗಂಡಸಿನ ಥರ ಎದುರು ಬಂದು ನಿಂತರೆ ನಾನು ಮೆಚ್ಚುತ್ತೇನೆ. ಗೊತ್ತಿಲ್ಲದೇ ತಪ್ಪು ಮಾಡಿದ್ದಾರೆ ಅಂತ ರಮ್ಯಾ ಅವರ ಬಳಿ ನಾನೇ ಮನವಿ ಮಾಡಿ, ಕ್ರಮ ತೆಗೆದುಕೊಳ್ಳಬೇಡಿ ಎನ್ನುತ್ತೇನೆ. ಇದೆಲ್ಲ ಇಲ್ಲದೇ ಹಾಗೆಯೇ ಮುಂದುವರಿಯುವುದಾದರೆ ಕಾನೂನಿನ ಮೂಲಕ ಬುದ್ಧಿ ಕಲಿಸುತ್ತೇವೆ’ ಎಂದು ರಾಕ್ಲೈನ್ ವೆಂಕಟೇಶ್ ಹೇಳಿದ್ದಾರೆ.

Leave a Reply

Your email address will not be published. Required fields are marked *