ತಿರುಪತಿ : ತಿರುಪತಿ ತಿರುಮಲ ದೇವಸ್ಥಾನದಲ್ಲಿ ಕನ್ನಡಿಗರೊಬ್ಬರ ಕಾರ್ ಮೇಲಿದ್ದ ಸ್ಟಿಕ್ಕರ್ ತೆಗೆಯಬೇಕು ಎನ್ನುವ ವಿಚಾರ ವಿವಾದ ಸ್ವರೂಪ ಪಡೆದುಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಇದನ್ನು ಕನ್ನಡಿಗರು ಇದೊಂದು ಭಾಷಾ ವಿವಾದ ಎಂದೂ ಹೇಳುತ್ತಿದ್ದಾರೆ. ತಿರುಪತಿ ತಿರುಮಲ ದೇವಸ್ಥಾನಕ್ಕೆ ಕರ್ನಾಟಕದಿಂದಲೂ ನಿತ್ಯ ಸಾವಿರಾರು ಜನ ಹೋಗುತ್ತಾರೆ. ಟಿಟಿಡಿ ಸಹ ಎಲ್ಲಾ ರಾಜ್ಯ, ದೇಶ – ವಿದೇಶದಿಂದ ಬರುವ ಭಕ್ತಾದಿಗಳು ತಿಮ್ಮಪ್ಪನ ದರ್ಶನ ಪಡೆದುಕೊಳ್ಳುವುದಕ್ಕೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಸಹ ಅಭಿವೃದ್ಧಿಪಡಿಸುತ್ತಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ವ್ಯವಸ್ಥೆ ಇನ್ನಷ್ಟು ಸುಧಾರಿಸಿದೆ. ಇದರ ಹೊರತಾಗಿಯೂ ತಿರುಪತಿ ಬೆಟ್ಟವನ್ನು ಪ್ರವೇಶವನ್ನು ಮಾಡುವ ಸಂದರ್ಭದಲ್ಲಿ ಇರುವ ತಪಾಸಣಾ ಕೇಂದ್ರದಲ್ಲಿನ ಕೆಲವು ನಿಯಮಗಳು ಸಾರ್ವಜನಿಕರಲ್ಲಿ ಗೊಂದಲಗಳನ್ನು ಸೃಷ್ಟಿ ಮಾಡಿದೆ. ಇದೀಗ ಬುಧವಾರವೂ ಇಂತಹದ್ದೇ ಘಟನೆಯೊಂದು ನಡೆದಿದೆ.
ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಸಾಕಷ್ಟು ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಊಟ, ವಸತಿ ಸೇರಿದಂತೆ ಹಲವು ಸೌಲಭ್ಯಗಳನ್ನು ಮಾಡಿದೆ. ಆದರೆ, ಟಿಟಿಡಿ ಅಳವಡಿಸಿಕೊಂಡಿರುವ ಕೆಲವು ನೂತನ ಹಾಗೂ ಹಳೆಯ ನಿಯಮಗಳ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಅಲ್ಲದೆ ಟಿಟಿಡಿ ಕೆಲವೊಂದು ಗೊಂದಲದ ನಿಯಮಗಳನ್ನು ಅಳವಡಿಸಿಕೊಂಡಿದೆ ಎನ್ನುವ ಆರೋಪವೂ ಇದೆ. ತಿರುಪತಿಗೆ ಭೇಟಿ ನೀಡಿದ ಕನ್ನಡಿಗರ ವಾಹನವನ್ನು ಸ್ಟಿಕ್ಕರ್ ಕಾರಣಕ್ಕೆ ಪ್ರವೇಶ ನಿಷೇಧಿಸಲಾಗಿದೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಘಟನೆಯ ಹಿನ್ನೆಲೆ ಏನು: ತಿರುಪತಿಗೆ ಎಂದಿನಂತೆ ಕನ್ನಡಿಗರ ಕುಟುಂಬ ಕಾರ್ನಲ್ಲಿ ಹೋಗಿದೆ. ಆದರೆ ಬೆಟ್ಟಕ್ಕೆ ಹೋಗುವ ಚೆಕ್ ಪೋಸ್ಟ್ನಲ್ಲಿನ ಸಿಬ್ಬಂದಿ ಅವರನ್ನು ತಡೆದು ಕಾರ್ನ ಮೇಲಿರುವ ಸ್ಟಿಕ್ಕರ್ ತೆಗೆಯುವಂತೆ ಸೂಚನೆ ನೀಡಿದ್ದಾರೆ. ಈ ಸ್ಟಿಕ್ಕರ್ ಕರ್ನಾಟಕ ಬಾವುಟದ ಬಣ್ಣ ( ಕೆಂಪು ಮತ್ತು ಹಳದಿ) ಇರುವುದರಿಂದ ಅದನ್ನು ತೆಗೆಯಬೇಕು ಎಂದು ಸಿಬ್ಬಂದಿ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಕಾರಿನ ಮೇಲೆ ಬಾವುಟದ ಬಣ್ಣ ಇರುವುದಕ್ಕೆ ತಿರುಪತಿ ಬೆಟ್ಟದ ಮೇಲೆ ಪ್ರವೇಶ ಮಾಡುವುದನ್ನು ನಿರಾಕರಿಸಲಾಗಿದೆ ಎಂದು ದೂರಲಾಗಿದೆ. ದೇವರ ಹೆಸರನ್ನು ಕಾರ್ನ ಮೇಲೆ ಹಾಕಿಸಲಾಗಿದೆ. ಕೆಂಪು ಮತ್ತು ಹಳದಿ ಬಣ್ಣ ಇರುವುದರಿಂದ ಬಿಡುತ್ತಿಲ್ಲ. ಇದಕ್ಕೆ ಅನುಮತಿ ತೆಗೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ ಎನ್ನುವುದು ವಿಡಿಯೋದಲ್ಲಿ ಇದೆ. ಕರ್ನಾಟಕದ ಬಣ್ಣ ಇರುವುದರಿಂದ ಬಿಡಲು ಸಾಧ್ಯವಿಲ್ಲ ಎಂದು ಅಲ್ಲಿನ ಸಿಬ್ಬಂದಿ ತೆಲುಗು ಭಾಷೆಯಲ್ಲಿ ಹೇಳಿರುವುದು ವಿಡಿಯೋದಲ್ಲಿ ಇದೆ.
ಕನ್ನಡಿಗರಿಂದ ಆಕ್ರೋಶ: ತಿರುಪತಿ ತಿರುಮಲದಲ್ಲಿ ನಡೆದಿರುವ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹಲವು ಕನ್ನಡಿಗರು ಈ ಬೆಳವಣಿಗೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದಾನಂದ ಎನ್ನವವರು ಇದು ಕನ್ನಡದ ಬಾವುಟ. ಇದನ್ನು ದೇವಸ್ಥಾನ, ಮಸೀದಿ, ಚರ್ಚ್ಗೆ ಕೊಂಡೊಯ್ಯಬಹುದಾದ ರೀತಿಯಲ್ಲಿ ವಿನ್ಯಾಸವನ್ನು ಹೊಂದಿದೆ. ನೀವು ಅದನ್ನು ಅಯೋಧ್ಯೆ , ತಿರುಪತಿ ಅಥವಾ ಮೆಕ್ಕಾಗೆ ಕೊಂಡೊಯ್ಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಹಲವು ಕನ್ನಡಿಗರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.