ತುಮಕೂರು: ನಗರದ ಐತಿಹಾಸಿಕ ಹಾಗೂ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಅಮಾನಿಕೆರೆಯಲ್ಲಿ ಕೆಲವೊಂದು ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದ ಬೋಟಿಂಗ್ ಸೇವೆಯನ್ನು ಪುನಃ ಆರಂಭಿಸಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಂಬAಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಅಮಾನಿಕೆರೆಗೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು, ಅಮಾನಿಕೆರೆಯ ಸುತ್ತ ವಾಕಿಂಗ್ ಪಾತ್, ಸಂಗೀತ ಕಾರಂಜಿ, ಗಾಜಿನ ಮನೆ, ಪುಟಾಣಿ ಮಕ್ಕಳ ಆಟದ ಜಾಗ, ಕಲ್ಯಾಣಿ ಮುಂತಾದ ಸೌಲಭ್ಯಗಳ ನಿರ್ವಹಣೆಯ ಮೇಲೂ ಹೆಚ್ಚಿನ ಗಮನ ಹರಿಸಿ ಸೂಕ್ತ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.
ದಶಕಗಳ ಹಿಂದೆ ಹೂಳು ತುಂಬಿ ನಾಶವಾಗಿದ್ದ ಅಮಾನಿಕೆರೆ ಇತ್ತೀಚೆಗೆ ಸಂಪೂರ್ಣ ರೂಪಾಂತರಗೊಳ್ಳುತ್ತಿದ್ದು, ಇದೀಗ ಸುಂದರ ಉದ್ಯಾನವನವಾಗಿ ಪರಿವರ್ತನೆ ಹೊಂದಿದೆ. ಈ ಉದ್ಯಾನದಲ್ಲಿ ಹಸಿರು ಪರಿಸರದ ನಡುವೆ ವಿಶ್ರಾಂತಿ, ಮನರಂಜನೆ ಹಾಗೂ ಮಕ್ಕಳಿಗೆ ಆಟವಾಡಲು ಆಟಿಕೆಗಳು ಇದ್ದು, ಪ್ರವಾಸಿಗರ ಸಂತಸಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಉಮೇಶ್ ಚಂದ್ರ, ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರವೀಣ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
ಅಮಾನಿಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಪುನರಾರಂಭಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಕಾರ್ಯಾದೇಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಬೋಟಿಂಗ್‌ಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಅಧಿಕೃತವಾಗಿ ಚಾಲನೆ ನೀಡಲು ವ್ಯವಸ್ಥೆ ಮಾಡಲಾಗುವುದು. ಸ್ಮಾರ್ಟ್ ಸಿಟಿ ಸಹಯೋಗದಲ್ಲಿ ‘ಅರ್ಬನ್ ಹಾತ್’ ಯೋಜನೆಯಡಿ ನಗರದ ಅಮಾನಿಕೆರೆ ಉದ್ಯಾನದ ಬಳಿ 16 ಮಳಿಗೆಗಳನ್ನು ಪ್ರಾರಂಭಿಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ.
ಬಿ.ವಿ.ಅಶ್ವಿಜಾ, ಆಯುಕ್ತರು, ಮಹಾನಗರ ಪಾಲಿಕೆ
For More Updates Join our WhatsApp Group :