ತುಮಕೂರು || ಬ್ಯಾಂಕ್ ನೊಂದಿಗೆ ಆಧಾರ್ ಕಾರ್ಡ್ ಜೋಡಿಸಿ : ಇಂದೇ ಹಣ ಪಡೆಯಿರಿ

ತುಮಕೂರು: ಜಿಲ್ಲೆಯ ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ಏಪ್ರಿಲ್ ೧ ರಿಂದ ಕೊಬ್ಬರಿ ಖರೀದಿ ಮಾಡಲಾಗುತ್ತಿದ್ದು, ಇಲ್ಲಿಯವರೆಗೂ ೧೨,೨೬೨ ರೈತರ ಖಾತೆಗೆ ಡಿಬಿಟಿ ಮೂಲಕ ಒಟ್ಟು ೧೮೦.೨ಕೋಟಿ ರೂ. ಪಾವತಿಸಲಾಗಿದೆ ಎಂದು ಕೃಷಿ ಮಾರಾಟ ಇಲಾಖೆ ಉಪ ನಿರ್ದೇಶಕ ಬಿ.ರಾಜಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಧಾರ್ ಕಾರ್ಡ್‌ ಜೋಡಿಸಿ: ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆಯಾಗದಿರುವ ಕಾರಣ ಜಿಲ್ಲೆಯಲ್ಲಿ ಒಟ್ಟು ೧೩೦ ರೈತರಿಗೆ ಕೊಬ್ಬರಿ ಖರೀದಿ ಹಣ ಪಾವತಿಯಾಗದೆ ಬಾಕಿ ಉಳಿದುಕೊಂಡಿದ್ದು, ಪಾವತಿಯಾಗದೇ ಇರುವ ರೈತರ ವಿವರಗಳನ್ನು ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ಪ್ರದರ್ಶಿಸಲಾಗಿದೆ. ಖಾತೆಗೆ ಹಣ ಜಮೆಯಾಗದ ರೈತರು ಬ್ಯಾಂಕುಗಳಿಗೆ ತೆರಳಿ ತಮ್ಮ ಖಾತೆಯೊಂದಿಗೆ ಆಧಾರ್ ಜೋಡಣೆ ಮಾಡಿಸಿದ ನಂತರ ಹಣ ಪಾವತಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಕೊಬ್ಬರಿ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದಾದರೂ ಸಮಸ್ಯೆ ಕಂಡು ಬಂದಲ್ಲಿ ಸಹಾಯವಾಣಿ ಸಂಖ್ಯೆ ೧೮೦೦೪೨೫೧೫೫೨ಕ್ಕೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿರುವ ೨೬ ಕೊಬ್ಬರಿ ಖರೀದಿ ಕೇಂದ್ರಗಳಿಂದ ಶೇಕಡಾ ೭೮ರಷ್ಟು ಕೊಬ್ಬರಿ ಖರೀದಿಯಾಗಿದೆ. ರಾಜ್ಯ ಸರ್ಕಾರದಿಂದ ಕೃಷಿ ಮಾರಾಟ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾರಾಟ ಮಂಡಳಿಗೆ ೪೦೦ ಕೋಟಿ ರೂ. ಬಿಡುಗಡೆಯಾಗಿದ್ದು, ಬಾಕಿ ಉಳಿದ ರೈತರಿಗೆ ಡಿಬಿಟಿ ಮೂಲಕ ಶೀಘ್ರವಾಗಿ ಪಾವತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *