ಹೊಸ ಸರ್ಕಾರದ 100 ದಿನಗಳ ಕಾರ್ಯಸೂಚಿ ಬಗ್ಗೆ ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಸಭೆ

ನವದೆಹಲಿ: ಮತದಾನೋತ್ತರ ಸಮೀಕ್ಷೆಯಲ್ಲಿ ಎನ್​ಡಿಎಗೆ ಬಹುಮತ ಸಿಗಲಿದೆ ಎಂಬ ಭವಿಷ್ಯ ಹೊರಬಿದ್ದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಹೊಸ ಸರ್ಕಾರದ ಕಾರ್ಯಸೂಚಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಭಾನುವಾರ ಸರಣಿ ಸಭೆ ನಡೆಸಿದರು.

ಈಶಾನ್ಯ ರಾಜ್ಯಗಳಲ್ಲಿ ರೆಮಲ್​ ಚಂಡಮಾರುತದಿಂದ ಸಂಭವಿಸಿದ ಹಾನಿ, ಉತ್ತರದ ರಾಜ್ಯಗಳಲ್ಲಿ ರಣಬಿಸಿಲಿನ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಪ್ರಧಾನಿ, ಆಯಾ ಭಾಗದಲ್ಲಿ ತ್ವರಿತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಇದಾದ ಬಳಿಕ, ಜೂನ್ 4ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮತ್ತು ಹೊಸ ಸರ್ಕಾರದ ಮೊದಲ 100 ದಿನಗಳ ಕಾರ್ಯಸೂಚಿ ಏನೆಂಬುದರ ಬಗ್ಗೆಯೂ ಅವಲೋಕನ ನಡೆಸಿದ್ದಾರೆ. ಹೊಸ ಸರ್ಕಾರ ತ್ವರಿತವಾಗಿ ಮಾಡುವ ಮತ್ತು ಆದ್ಯತಾ ವಿಷಯಗಳು ಏನೆಂಬುದನ್ನು ಪಟ್ಟಿ ಮಾಡಲು ಸಚಿವರಿಗೆ ತಾಕೀತು ಮಾಡಿದರು ಎಂದು ಮೂಲಗಳು ತಿಳಿಸಿವೆ.

ಚಂಡಮಾರುತದ ನಂತರದ ಈಶಾನ್ಯದ ರಾಜ್ಯಗಳಲ್ಲಿ ಉಂಟಾದ ಹಾನಿ ಪರಿಸ್ಥಿತಿ ಮತ್ತು ದೇಶದ ಕೆಲವು ಭಾಗಗಳಲ್ಲಿ ಬಿಸಿಗಾಳಿಯಿಂದ ಜನರು ತತ್ತರಿಸುತ್ತಿರುವ ಬಗ್ಗೆಯೂ ಪ್ರಧಾನಿ ಉನ್ನತ ಅಧಿಕಾರಿಗಳಿಂದ ಮಹತ್ವದ ಮಾಹಿತಿ ಕಲೆ ಹಾಕಿದರು. ಇದಾದ ಬಳಿಕ ಹಾನಿ ಪರಿಹಾರ ಕಾರ್ಯ ಶೀಘ್ರ ಗತಿಯಲ್ಲಿ ಸಾಗಲೂ ಸೂಚಿಸಿದರು. ಜೊತೆಗೆ, ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲು ಸಿದ್ಧತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ಕೂಡ ವಹಿಸಿದ್ದರು.

Leave a Reply

Your email address will not be published. Required fields are marked *