ಬೆಂಗಳೂರು: ತುಂಗಭದ್ರಾ ಡ್ಯಾಮ್‌ನ 33 ಕ್ರಸ್ಟ್ ಗೇಟನ್ನೂ ತಕ್ಷಣವೇ ಬದಲಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಾತಾಡಿದ ಅವರು ತುಂಗಭದ್ರಾ ಅಣೆಕಟ್ಟಿನ ವಿಚಾರದಲ್ಲಿ ಅಲ್ಲಿನ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರ ಹೇಳಿಕೆಯನ್ನೂ ಗಮನಿಸಿದ್ದೇನೆ. ಕಳೆದ ಆಗಸ್ಟ್ನಲ್ಲಿ 19ನೇ ಕ್ರಸ್ಟ್ ಗೇಟ್ ಮುರಿದುಬಿದ್ದಿತ್ತು. ರೈತರೂ ಆತಂಕದಲ್ಲಿ ಇದ್ದರು. ಸಾವಿರಾರು ಕ್ಯುಸೆಕ್ ನೀರು ಹರಿದು ವ್ಯರ್ಥವಾಗಿದೆ. ಅದಕ್ಕೆ ಖಾಯಂ ಪರಿಹಾರ ನೀಡಿಲ್ಲ. ಇವರು ತಡ ಮಾಡಿದ್ದು, ನೀರಿನ ಒತ್ತಡ ಇತರ ಗೇಟ್‌ಗಳ ಮೇಲೆ ಬಿದ್ದಿದೆ. ಇದರ ಪರಿಣಾಮವಾಗಿ ಎಲ್ಲ 33 ಕ್ರಸ್ಟ್ ಗೇಟನ್ನೂ ತಕ್ಷಣ ಬದಲಿಸಬೇಕಾದ ಪರಿಸ್ಥಿತಿ ಒದಗಿಬಂದಿದೆ ಎಂದಿದ್ದಾರೆ.
ಮತ್ತೊಂದು ಕಡೆ ಕೊಪ್ಪಳ, ರಾಯಚೂರು, ಬಳ್ಳಾರಿ ಮೊದಲಾದ ಜಿಲ್ಲೆಗಳ ರೈತರು ಪ್ರತಿವರ್ಷ 2 ಬೆಳೆ ಬೆಳೆಯುತ್ತಿದ್ದರು. ಆದರೆ, ಸಚಿವರ ಮತ್ತು ರಾಜ್ಯ ಸರ್ಕಾರದ ಬೇಜವಾಬ್ದಾರಿತನದಿಂದ ರಾಜ್ಯ ಸರ್ಕಾರ ಅಥವಾ ಸಂಬಂಧಿತ ಸಚಿವರು, ಟಿ.ಬಿ. ನೀರಾವರಿ ಮಂಡಳಿಯಲ್ಲಿ ಚರ್ಚೆ ಮಾಡಿ, ಒತ್ತಡ ಹಾಕದ ಪರಿಣಾಮವಾಗಿ ಈ ಬಾರಿ ರೈತರು ಒಂದೇ ಬೆಳೆಗೆ ತೃಪ್ತಿ ಪಡುವ ಸಂದರ್ಭ ಬಂದಿದೆ ಎಂದು ಟೀಕಿಸಿದ್ದಾರೆ.
ನುಡಿದಂತೆ ನಡೆಯುವ ರಾಜ್ಯ ಸರ್ಕಾರದಡಿ ರಾಜ್ಯದ ಹಣಕಾಸಿನ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದರೆ ಸ್ವಾತಂತ್ರ‍್ಯ ಹೋರಾಟಗಾರರ ಮಾಸಾಶನ ಕೊಡುವ ಯೋಗ್ಯತೆಯೂ ಈ ಸರ್ಕಾರಕ್ಕೆ ಇಲ್ಲ. ಅವರು ಸ್ವಾತಂತ್ರ‍್ಯ ಹೋರಾಟಗಾರರ ಮಾಸಾಶನ 4.85 ಕೋಟಿ ರೂ. ಮೊತ್ತವನ್ನು ಕೊಡದೇ ತಡೆ ಹಿಡಿದಿದ್ದಾರೆ. ಇದನ್ನು ಪ್ರಶ್ನಿಸಿದರೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಬಹಳ ಚೆನ್ನಾಗಿದೆ ಎಂದು ಸಿದ್ದರಾಮಯ್ಯನವರು ಹೇಳುತ್ತಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣವನ್ನು ಬಿಡುಗಡೆ ಮಾಡದಂಥ ದುಸ್ಥಿತಿಗೆ ಬಂದು ನಿಂತಿದೆ ಎಂದಿದ್ದಾರೆ.