ಜೋಧ್ಪುರ್: ವರದಕ್ಷಿಣೆ ಕಿರುಕುಳ ತಾಳಲಾರದೆ ಉಪನ್ಯಾಸಕಿಯೊಬ್ಬರು ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ ಜೋಧ್ಪುರದಲ್ಲಿ ನಡೆದಿದೆ. ಮಹಿಳೆ ಮೂರು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡಿದ್ದರು. ಸಂಜು ಬಿಷ್ಣೋಯ್ ಎಂಬ ಮಹಿಳೆ ತನ್ನ ಪತಿ ಮತ್ತು ಅತ್ತೆ-ಮಾವ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಈ ಭೀಕರ ಕೃತ್ಯ ಎಸಗಿದ್ದಾಳೆ. ಮಗು ಸ್ಥಳದಲ್ಲೇ ಸಾವನ್ನಪ್ಪಿದರೆ, ಸಂಜು ಶನಿವಾರ ಬೆಳಗ್ಗೆ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ.
ಜೋಧ್‌ಪುರದ ದಂಗಿಯಾವಾಸ್ ಪೊಲೀಸ್ ಠಾಣೆ ಪ್ರದೇಶದ ಸರ್ನಾದಾ ಗ್ರಾಮದಲ್ಲಿರುವ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ. ಎನ್‌ಡಿಟಿವಿ ವರದಿಯ ಪ್ರಕಾರ, ಸಂಜು ಮಧ್ಯಾಹ್ನ ಶಾಲೆಯಿಂದ ಹಿಂತಿರುಗಿ ತಾನು ಹಾಗೂ ತನ್ನ ಮಗಳ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.
ಘಟನೆಯ ಸಮಯದಲ್ಲಿ, ಪತಿ ಅಥವಾ ಅತ್ತೆ-ಮಾವ ಮನೆಯಲ್ಲಿ ಇರಲಿಲ್ಲ. ಆಕೆ ಬೆಂಕಿ ಹಚ್ಚಿಕೊಂಡ ನಂತರ, ಮನೆಯಿಂದ ಹೊಗೆ ಹೊರಹೊಮ್ಮುತ್ತಿರುವುದನ್ನು ನೆರೆಹೊರೆಯವರು ಗಮನಿಸಿದರು, ಅವರು ತಕ್ಷಣ ಪೊಲೀಸರಿಗೆ ಮತ್ತು ಕುಟುಂಬಕ್ಕೆ ಮಾಹಿತಿ ನೀಡಿದ್ದರು.ಕುಟುಂಬ ಮತ್ತು ಪೊಲೀಸರು ಸ್ಥಳಕ್ಕೆ ತಲುಪಿದರು. ಆದರೆ ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿತ್ತು. ಸಂಜು ಉಸಿರಾಡುತ್ತಿದ್ದರೂ ದೇಹ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಚಿಕಿತ್ಸೆ ಸಮಯದಲ್ಲಿ ಮೃತಪಟ್ಟಿದ್ದಾರೆ.
ಪೊಲೀಸರು ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ಆ ಪತ್ರದಲ್ಲಿ, ಸಂಜು ತನ್ನ ಅತ್ತೆ ಮತ್ತು ಪತಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಸಂಜುವಿನ ಪೋಷಕರಿಗೆ ಹಸ್ತಾಂತರಿಸಲಾಯಿತು, ನಂತರ ತಾಯಿ ಮತ್ತು ಮಗಳ ಅಂತ್ಯಕ್ರಿಯೆ ನಡೆಸಲಾಯಿತು.
ಈ ದುರಂತ ಘಟನೆಯ ನಂತರ, ಎರಡೂ ಕುಟುಂಬಗಳು ಜಗಳವಾಡಿವೆ.ಸಂಜು ಅವರ ಪೋಷಕರು ಆಕೆಯ ಪತಿ ದಿಲೀಪ್ ಬಿಷ್ಣೋಯ್ ಮತ್ತು ಅವರ ಪೋಷಕರ ಮೇಲೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.ಎಫ್ಐಆರ್ ಕೂಡ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದ ಪುರಾವೆಗಳನ್ನು ಸಂಗ್ರಹಿಸಲು ಪೊಲೀಸರು ವಿಧಿವಿಜ್ಞಾನ ತಂಡವನ್ನು (ಎಫ್‌ಎಸ್‌ಎಲ್) ಸ್ಥಳಕ್ಕೆ ಕರೆಸಿದ್ದಾರೆ.ಮೊಬೈಲ್ ಫೋನ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ.ಸಂಜು ಗಣಪತ್ ಸಿಂಗ್ ಎಂಬ ವ್ಯಕ್ತಿಯ ಮೇಲೆ ಕಿರುಕುಳದ ಆರೋಪವನ್ನೂ ಮಾಡಿದ್ದಾಳೆ. ಗಣಪತ್ ಸಿಂಗ್ ಮತ್ತು ದಿಲೀಪ್ ಆಕೆಗೆ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ಪೊಲೀಸರು ಗಣಪತ್ ನನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ.
For More Updates Join our WhatsApp Group :