ನವದೆಹಲಿ: 65 ಕೋಟಿ ರೂ. ವಹಿವಾಟು ನಡೆಸುವ ಮೂಲಕ ವೀಸಾವನ್ನು ಹಿಂದಿಕ್ಕಿ ಯುಪಿಐ (UPI) ವಿಶ್ವದಲ್ಲೇ ಅತೀ ದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ.
ಭಾರತದಲ್ಲಿ ಮೊಬೈಲ್ ಮೂಲಕ ನಡೆಯುವ ವಹಿವಾಟಿನ ಮೂಲವಾದ ಏಕೀಕೃತ ಪಾವತಿ ಇಂಟರ್ಫೇಸ್ (UPI) ಈಗ ವಿಶ್ವದ ಅತಿದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಈ ಮೂಲಕ ಈವರೆಗೆ ನಂ.1 ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದ್ದ ವೀಸಾವನ್ನು ಹಿಂದಿಕ್ಕಿದೆ

ಈ ಕುರಿತು ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ (Amitabh Kant) ಅವರು ಎಕ್ಸ್ನಲ್ಲಿ (X) ಪೋಸ್ಟ್ ಹಂಚಿಕೊಂಡಿದ್ದು, 2025ರ ಮೇ-ಜೂನ್ನಲ್ಲಿ ಯುಪಿಐ ಪ್ರತಿದಿನ 65 ಕೋಟಿ ರೂ.ಯ ವಹಿವಾಟನ್ನು ನಡೆಸಿದ್ದು, ಇದೇ ಅವಧಿಯಲ್ಲಿ ವೀಸಾ 63.9 ಕೋಟಿ ರೂ ವಹಿವಾಟು ನಡೆಸಿದೆ. ವೀಸಾ 200 ದೇಶಗಳಲ್ಲಿ ಜಾರಿಯಲ್ಲಿದ್ದು, ಯುಪಿಐ ಕೇವಲ 7 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಕೂಡ ವೀಸಾವನ್ನು ಹಿಂದಿಕ್ಕಿರುವುದು ವಿಶೇಷ. ಕಳೆದ ತಿಂಗಳೇ ಈ ಸಾಧನೆ ಮಾಡಿದೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಯುಪಿಐ ಮೂಲಕ ಗೂಗಲ್ ಪೇ, ಫೋನ್ ಪೇ, ಭೀಮ್ ಯುಪಿಐ, ಅಮೇಜಾನ್ ಪೇ, ವಾಟ್ಸಾಪ್ ಪೇ ಸೇರಿದಂತೆ ಹಲವು ಡಿಜಿಟಲ್ ಪಾವತಿ ಕಂಪನಿಗಳು ಸೇವೆ ಒದಗಿಸುತ್ತವೆ. ಬ್ಯಾಂಕ್ ಖಾತೆಯನ್ನು ಜನರು ಈ ಆ್ಯಪ್ಗಳಲ್ಲಿ ಲಿಂಕ್ ಮಾಡಬೇಕು. ಕೆಲವೇ ಕ್ಷಣಗಳಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಇದರಿಂದ ಹಣ ಪಾವತಿ ಮಾಡಬಹುದು. ಜಾರಿಯಾದ 9 ವರ್ಷಗಳಲ್ಲೇ ಈ ಸಾಧನೆ ಮಾಡಿರುವುದು ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ