ಉತ್ತರಪ್ರದೇಶ: ಆಭರಣ ಅಂಗಡಿಯಿಂದ ಸುಮಾರು 19 ಕೆಜಿ ಚಿನ್ನವನ್ನು ಕಳವು ಮಾಡಿರುವ ಪ್ರಕರಣ ಉತ್ತರಪ್ರದೇಶದಲ್ಲಿ ನಡೆದಿದೆ. ಜ್ಯುವೆಲ್ಲರಿ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಹಳೆಯ ಉದ್ಯೋಗಿ ವಿರುದ್ಧ ಮಾಲೀಕರು ಕಳ್ಳತನದ ಪ್ರಕರಣ ದಾಖಲಿಸಿದ್ದಾರೆ.

ಈ ಕಳ್ಳತನ ಒಂದೇ ಬಾರಿಗೆ ನಡೆದಿಲ್ಲ ಕಂತುಗಳಲ್ಲಿ ನಡೆದಿದೆ ಎಂದು ಅಂಗಡಿ ಮಾಲೀಕರು ದೂರಿನಲ್ಲಿ ಹೇಳಿಕೊಂಡಿದ್ದಾರೆ. ಯಾರಿಗೂ ಅನುಮಾನ ಬರಬಾರದು ಎಂದು ನಿತ್ಯ 20 ರಿಂದ 30 ಗ್ರಾಂ ಚಿನ್ನವನ್ನು ಕದಿಯಲಾಗುತ್ತಿತ್ತು. ಇಲ್ಲಿಯವರೆಗೆ, ಇತರ ರಾಜ್ಯಗಳಿಂದ ವ್ಯಾಪಾರಿಗೆ ತಲುಪುತ್ತಿದ್ದ 19 ಕೆಜಿ ಚಿನ್ನವನ್ನು ಅಂಗಡಿಯಿಂದ ಕಳವು ಮಾಡಲಾಗಿದೆ. ಹರ್ದೋಯ್ನ ಸಿನಿಮಾ ಚೌರಾಹಾದಲ್ಲಿರುವ ಅತುಲ್ ಜ್ಯುವೆಲ್ಲರ್ಸ್ನಲ್ಲಿ ಈ ಘಟನೆ ನಡೆದಿದೆ.
ಪ್ರಕರಣದ ಬಗ್ಗೆ ಪೊಲೀಸರು ನೀಡಿರುವ ಮಾಹಿತಿ ಹೀಗಿದೆ: ಕಾಣೆಯಾದ ಚಿನ್ನದ ಬೆಲೆ ಕೋಟ್ಯಂತರ ರೂಪಾಯಿಗಳಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಂಗಡಿಯ ಮಾಲೀಕ ಶಿವಂ ಕಪೂರ್, ಅಂಗಡಿಯ ಉದ್ಯೋಗಿ ಬಾಲಕೃಷ್ಣ ಪಾಂಡೆ ಎಂಬುವರ ವಿರುದ್ಧ ಕಳ್ಳತನದ ಆರೋಪ ಮಾಡಿದ್ದಾರೆ. ಬಾಲಕೃಷ್ಣ ಮಾತ್ರವಲ್ಲದೇ ಅವರ ತಂದೆ ಮತ್ತು ಸಹೋದರ ಕೂಡ ಕಳೆದ 25 ವರ್ಷಗಳಿಂದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.
ಅಂಗಡಿಯ ಇನ್ನಿಬ್ಬರು ಉದ್ಯೋಗಿಗಳಾದ ಅರವಿಂದ್ ಗುಪ್ತಾ ಮತ್ತು ಬಾಕು ಅವರ ಮೇಲೂ ತನಿಖೆ ನಡೆಯುತ್ತಿದೆ. ಪ್ರಕರಣ ದಾಖಲಿಸಿಕೊಂಡ ನಂತರ ಪೊಲೀಸರು ಮಹಾರಾಜ ಸಿಂಗ್ ಪಾರ್ಕ್ ಬಳಿಯ ಛೋಟೆ ಅವರ ಮನೆ ಮೇಲೆ ದಾಳಿ ನಡೆಸಿ ಕೆಲವು ಜನರನ್ನು ಬಂಧಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಒಂದೊಂದೇ ವಿಚಾರ ಬಯಲಿಗೆ ಬಂದಿದೆ. ಆರೋಪಿತ ಬಾಲಕೃಷ್ಣ ಪಾಂಡೆ ಅವರನ್ನು ಪ್ರಶ್ನಿಸಿದಾಗ, ಅವರು ನೆಪಗಳನ್ನು ಹೇಳಲು ಪ್ರಾರಂಭಿಸಿದರು. ಇದು ಪೊಲೀಸರ ಅನುಮಾನಗಳನ್ನು ಮತ್ತಷ್ಟು ಹೆಚ್ಚುವಂತೆ ಮಾಡಿತು. ಪಾಂಡೆ ತಾನು ಯೋಜನೆ ಮಾಡಿಕೊಂಡಂತೆ, ಕೆಲವೊಮ್ಮೆ 20 ಗ್ರಾಂ ಮತ್ತು ಕೆಲವೊಮ್ಮೆ 30 ಗ್ರಾಂ ಚಿನ್ನವನ್ನು ಕಣ್ಮರೆಯಾಗುವಂತೆ ಮಾಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.